ಮಂಗಳೂರಿನ ಉರ್ವ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಹಲ್ಲೆ ನಡೆಸಿದ ಆರೋಪದಲ್ಲಿ ಇಬ್ಬರನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದು, ಬಂಧಿತರನ್ನು ನೊವೆಲ್ ಸಿಕ್ವೇರಾ, ಜಾನ್ ಸಿಕ್ವೇರಾ ಎಂದು ಗುರುತಿಸಲಾಗಿದೆ.
ಹೆಡ್‌ಕಾನ್‌ಸ್ಟೇಬಲ್ ನಾರಾಯಣ, ಕಾನ್‌ಸ್ಟೇಬಲ್ ಪೂಜಾ ಹಿರೇಮಠ ಹಲ್ಲೆಗೊಳಗಾದವರು. ತಳ್ಳಾಟದಲ್ಲಿ ಗಾಯಗೊಂಡ ಇಬ್ಬರೂ ಪೊಲೀಸರನ್ನು ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಮಾತನಾಡಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಮೇ ತಿಂಗಳಲ್ಲಿ ಉರ್ವ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವವರು ನಿರ್ವಹಣಾ ಶುಲ್ಕ ಹಾಗೂ ನೀರು ಸಂಪರ್ಕ ಕೊಡುವುದರ ಕುರಿತು ಗಲಾಟೆ ನಡೆದಿತ್ತು. ಈ ಬಗ್ಗೆ ಎರಡು ಪ್ರಕರಣಗಳನ್ನು ದಾಖಲಿಸಲಾಗಿತ್ತು.
17 ವರ್ಷದ ಬಾಲಕಿಗೆ ಹಲ್ಲೆ ನಡೆಸಿರುವುದು ಹಾಗೂ ಪೊಕ್ಸೊ ಕೇಸು ದಾಖಲಾಗಿತ್ತು. ಮತ್ತೊಂದು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿತ್ತು ಎಂದು ಮಾಹಿತಿ ನೀಡಿದರು. ಈ ಎರಡೂ ಪ್ರಕರಣದಲ್ಲಿ ಅಪಾರ್ಟ್‌ಮೆಂಟ್‌ನ ಅಸೋಸಿಯೇಶನ್‌ನವರು ಮಾತನಾಡಿಕೊಂಡು ಡಿಸಿಪಿ ಕಚೇರಿಗೆ ಆಗಮಿಸಿದ್ದಾರೆ. ಪ್ರಕರಣವನ್ನು ಹಿಂಪಡೆಯಲು ಅವಕಾಶ ನೀಡಬೇಕೆಂದು ಕೇಳಿಕೊಂಡಿದ್ದಾರೆ.
ತನಿಖಾಧಿಕಾರಿಯಲ್ಲಿ ಹೇಳಿಕೆ ಕೊಡಲು ಡಿಸಿಪಿ ತಿಳಿಸಿ ಕಳುಹಿಸಿದ್ದಾರೆ. ನಂತರ ಅಪಾರ್ಟ್‌ಮೆಂಟ್ ಅಸೋಸಿಯೇಶನ್‌ನವರು ಠಾಣೆಗೆ ಆಗಮಿಸಿದ್ದಾರೆ. ಇನ್‌ಸ್ಪೆಕ್ಟರ್ ಕೊಠಡಿಯಲ್ಲಿ ಈ ಸಂಬಂಧ ಮಾತುಕತೆ ನಡೆಸುತ್ತಿದ್ದಾಗ ಆರೋಪಿಗಳು ಮೊಬೈಲ್‌ನಲ್ಲಿ ಶೂಟಿಂಗ್ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಅನುಚಿತವಾಗಿ ನಡೆದುಕೊಂಡಿದ್ದಾರೆ. ಮೊಬೈಲ್ ಎಳೆದು ಕೊಳ್ಳುವಾಗ ತಳ್ಳಾಟವಾಗಿ ಪೊಲೀಸರು ಗಾಯಗೊಂಡಿದ್ದಾರೆ ಎಂದು ವಿವರಿಸಿದರು.