ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರಸ್ಟ್ ಗೇಟ್ ಅಳವಡಿಸುವ ಕುರಿತು ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಜೊತೆ ಶೀಘ್ರದಲ್ಲಿಯೇ ಚರ್ಚೆ ನಡೆಸಿ ಹೊಸ ಗೇಟ್ ಅಳವಡಿಸಲಾಗುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ಕೊಪ್ಪಳ ತಾಲ್ಲೂಕಿನ ಮುನಿರಾಬಾದ್ ನಲ್ಲಿ ಭಾನುವಾರ ನಡೆದ ಗೇಟ್ ದುರಸ್ತಿಗೆ ಶ್ರಮಿಸಿದ ಅಧಿಕಾರಿಗಳು, ಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಜಲಾಶಯದ ಗೇಟ್ ಮುರಿದು ಬಿದ್ದ ವಿಚಾರವಾಗಿ ಬಿಜೆಪಿಯವರು ಅನೇಕ ಟೀಕೆ ಮಾಡಿದ್ದಾರೆ. ಇದೀಗ ಟೀಕೆಗಳು ಸತ್ತು ಹೋಗಿದ್ದು, ನಮ್ಮ ಕೆಲಸ ಮಾತ್ರ ಉಳಿದುಕೊಂಡಿದೆ ಎಂದರು.
ಕಾರ್ಮಿಕರು ಹಗಲಿರುಳು ಕೆಲಸ ಮಾಡುವ ಮೂಲಕ ರೈತರ ಬದುಕಿಗೆ ಜೀವ ತುಂಬಿದ್ದಾರೆ. ದೇಶ ಈ ಘಟನೆಯನ್ನು ಕುತೂಹಲದಿಂದ ನೋಡುತ್ತಿತ್ತು. ಇದನ್ನು ಸಮರ್ಥವಾಗಿ ನಮ್ಮ ತಂಡ ನಿರ್ವಹಣೆ ಮಾಡಿದೆ. ಹಳೆ ಗೇಟ್ ಬದಲಾವಣೆ ಮಾಡಬೇಕು ಎಂದು ಕೇಂದ್ರದ ತನಿಖಾ ತಂಡ ವರದಿ ಕೊಟ್ಟಿದ್ದು ಅದರ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ಹಂಚಿಕೊಂಡರು.<>