ಬೆಂಗಳೂರು : ಇಂದಿನಿಂದ ಜಾರಿಗೆ ಬರುವಂತೆ ಬಿಎಂಆರ್ಸಿಎಲ್ ತನ್ನ ಮೆಟ್ರೋ ಸಂಚಾರದ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದೆ. ಅಲ್ಲದೇ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡುವ ವೇಳೆ ಕೋವಿಡ್ 19 ನಿಬಂಧನೆಗಳನ್ನು ಪಾಲಿಸುವಂತೆಯೂ ಒತ್ತಾಯಿಸಿದೆ.
ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಮೆಟ್ರೋ ರೈಲುಗಳು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಂಚರಿಸಲಿದೆ ಎಂದು ಬಿಎಂಆರ್ಸಿಎಲ್ ಅಧಿಕೃತ ಮಾಹಿತಿ ನೀಡಿದೆ. ಇದರ ಪ್ರಕಾರ ದಿನದ ಕೊನೆಯ ಮೆಟ್ರೋ ರೈಲುಗಳು ರಾತ್ರಿ 9:30ಕ್ಕೆ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ಹಾಗೂ ಸಿಲ್ಕ್ ಇನ್ಸ್ಟಿಟ್ಯೂಟ್ ಟರ್ಮಿನಲ್ನಿಂದ ಹೊರಡಲಿದೆ.
ಕೋವಿಡ್ 19 ಕೇಸುಗಳು ಶುರುವಾದಾಗಿನಿಂದ ಮೆಟ್ರೋ ರೈಲುಗಳು ಬೆಳಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ಸಂಚಾರ ಮಾಡುತ್ತಿದ್ದವು.
ಬಿಎಂಆರ್ಸಿಎಲ್ ನೀಡಿರುವ ಮಾಹಿತಿಯ ಪ್ರಕಾರ ವಾರದ ದಿನಗಳಲ್ಲಿ ಜನಸಂದಣಿ ಹೆಚ್ಚಾಗುವ ಸಮಯಗಳಲ್ಲಿ ಮೆಟ್ರೋ ರೈಲಿನ ನಡುವಿನ ಅಂತರ 5 ನಿಮಿಷ ಇರಲಿದೆ. ಹಾಗೂ ಜನಸಂದಣಿ ಇಲ್ಲದ ಸಮಯದಲ್ಲಿ 10 ನಿಮಿಷಗಳ ಅಂತರದಲ್ಲಿ ಬೈಯಪ್ಪನಹಳ್ಳಿ - ಮೈಸೂರು ರಸ್ತೆಯ ನಡುವೆ ಹಾಗೂ ಹಸಿರು ಮಾರ್ಗದ ಯಲಚೇನಹಳ್ಳಿ ನಿಲ್ದಾಣಗಳ ನಡುವೆ ಮೆಟ್ರೋ ಓಡಾಡಲಿದೆ ಎಂದು ತಿಳಿಸಿದೆ.
ಸಿಲ್ಕ್ ಇನ್ಸ್ಟಿಟ್ಯೂಟ್ನಿಂದ ಕೆಂಗೇರಿ ನಿಲ್ದಾಣದಲ್ಲಿ ಮೆಟ್ರೋ ರೈಲು ಸಂಚಾರದ ನಡುವಿನ ಅಂತರವು 10 ನಿಮಿಷ ಇರಲಿದೆ. ಶನಿವಾರ ಹಾಗೂ ಭಾನುವಾರ ರೈಲು ಸಂಚಾರದ ಅವಧಿಯಲ್ಲಿ ಕೊಂಚ ಬದಲಾವಣೆ ಉಂಟಾಗಬಹುದು ಎಂದು ತಿಳಿಸಲಾಗಿದೆ.