Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬಿಬಿಎಂಪಿಯ ಸವಲತ್ತುಗಳನ್ನು ನೀಡದೆ ಸತಾಯಿಸಲಾಗ್ತಿದೆ ಎಂದು ಆರೋಪಿಸಿ, ಮಂಗಳಮುಖಿಯರು ಇಂದು ಪ್ರತಿಭಟನೆ ನಡೆಸಿದರು.ಬಿಬಿಎಂಪಿ ಕಲ್ಯಾಣ ವಿಭಾಗದ ವಿಶೇಷ ಆಯುಕ್ತರಾಗಿರುವ ತುಳಸಿ ಮದ್ದಿನೇನಿ ಅವರ ಕಚೇರಿ ಎದುರು ಪ್ರತಿಭಟನೆಗೆ ಮುಂದಾದರು. ಕಲ್ಯಾಣ ವಿಭಾಗದ ಮೂಲಕ ಮಂಗಳಮುಖಿಯರಿಗೆಂದೇ ಸ್ವ ಉದ್ಯೋಗಕ್ಕೆ ಅನುಕೂಲವಾಗುವಂತೆ ಕೋಟ್ಯಾಂತರ ಮೊತ್ತ ಕಾಯ್ದಿರಿಸಲಾಗಿದೆ.ಆದರೆ ತುಳಸಿ ಮದ್ದಿನೇನಿ ಅವರು ಹಣದ ಅಲಭ್ಯತೆಯ ನೆವ ಮುಂದೊಡ್ಡಿ ಹಣ ಬಿಡುಗಡೆ ಮಾಡದೆ ತೊಂದರೆ ಕೊಡುತ್ತಿದ್ದಾರೆ. ತಮಗಾಗಿರುವ ಅನ್ಯಾಯವನ್ನು ಕೇಳಿದ್ರೆ ತಮ್ಮನ್ನು ತುಚ್ಛವಾಗಿ ನೋಡುತ್ತಿದ್ದಾರೆ. ಸರ್ಕಾರವೇ ಹಣ ಕಾಯ್ದಿರಿಸಿದ್ದರೆ ಅದನ್ನು ಬಿಡುಗಡೆ ಮಾಡಲು ತುಳಸಿ ಅವರೇಕೆ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು. ಅನೇಕ ಬಾರಿ ಪ್ರತಿಭಟನೆ ಮೂಲಕ ಎಚ್ಚರಿಕೆ ನೀಡಿದ್ದೇವೆ. ಆದರೂ ಎಚ್ಚೆತ್ತುಕೊಂಡಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.