ಉದ್ಯಾನನಗರಿ, ಸಿಲಿಕಾನ್ ಸಿಟಿ ಎಂದೆಲ್ಲಾ ಹೆಸರು ಗಳಿಸಿರುವ ಬೆಂಗಳೂರಿನಲ್ಲಿ ಕೆಲಸ ಮಾಡುವ ಅನೇಕರಿಗೆ ಟ್ರಾಫಿಕ್ ಸಮಸ್ಯೆ ಹಾಗೂ ಪಾರ್ಕಿಂಗ್ ಸಮಸ್ಯೆ ನಿತ್ಯದ ಗೋಳು. ಮೆಟ್ರೋ ನಗರಿಯಲ್ಲಿ ದಿನೇ ದಿನೇ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ವಾಹನಗಳ ಪಾರ್ಕಿಂಗ್ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಅದರಲ್ಲೂ ಬೆಳಗ್ಗೆ ಎಲ್ಲರೂ ಕೆಲಸಕ್ಕೆ ತೆರಳುವ ಹಾಗೂ ಮರಳುವಂತಹ ಪ್ರಮುಖ ಸಮಯಗಳಲಂತೂ ಟ್ರಾಫಿಕ್ ವಿಪರೀತವಾಗಿರುತ್ತದೆ. ರಸ್ತೆಯ ಪ್ರತಿ ಇಂಚಿನಲ್ಲೂ ಕಾರುಗಳ ಚಕ್ರಗಳು ಕಾಣಿಸುತ್ತಿರುತ್ತವೆ. ಹೀಗಾಗಿ ವಾಹನಗಳ ಸಂಖ್ಯೆ ಭಾರಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಕೆಲ ಸೆಕೆಂಡುಗಳ ಕಾಲವೂ ಕೆಲವೊಮ್ಮೆ ಪಾರ್ಕಿಂಗ್ ಮಾಡಲು ಮಹಾನಗರಿಯಲ್ಲಿ ಸ್ಥಳವಿಲ್ಲದಂತಾಗಿದೆ. ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗದಂತೆ ತಡೆಯಲು ಪ್ರಮುಖ ಸ್ಥಳಗಳಲ್ಲಿ ಪ್ರತ್ಯೇಕ ಪಾರ್ಕಿಂಗ್ ಜಾಗಗಳನ್ನು ನಿಗದಿಪಡಿಸಲಾಗಿದೆ. ಒಂದು ವೇಳೆ ಇದನ್ನು ಮೀರಿದವರನ್ನು ಶಿಕ್ಷಿಸಲು ಪಾರ್ಕಿಂಗ್ ಮಾರ್ಷಲ್ಗಳು ಮತ್ತು ಪಾರ್ಕಿಂಗ್ ಅಲ್ಲದ ಜಾಗದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಹೊತ್ತೊಯ್ಯಲು ಟ್ರಕ್ಗಳು ನಗರಗಳಲ್ಲಿ ಸುಳಿದಾಡುತ್ತಿರುತ್ತವೆ. ಅದಾಗ್ಯೂ ಕೆಲವರು ಪಾರ್ಕಿಂಗ್ ನಿಯಮಗಳ ಬಗ್ಗೆ ತೀರಾ ನಿರ್ಲಕ್ಷ್ಯ ತೋರುತ್ತಿರುತ್ತಾರೆ. ಎಲ್ಲಿ ಪಾರ್ಕಿಂಗ್ ನಿಷೇಧ ಇದೆಯೋ ಅಲ್ಲೇ ವಾಹನಗಳನ್ನು ನಿಲ್ಲಿಸಿ ತೆರಳುತ್ತಾರೆ. ಇದರಿಂದ ಅನೇಕರಿಗೆ ತೊಂದರೆ ಉಂಟಾಗುತ್ತದೆ.