ರಾಜ್ಯದ ಹೆದ್ದಾರಿಗಳಲ್ಲಿ ಅವೈಜ್ಞಾನಿಕ, ಕಾನೂನುಬಾಹಿರ ಅನಧಿಕೃತ ಟೋಲ್ ಗಳನ್ನು ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಪ್ಪಿಗೆ ನೀಡಿದೆ.
ವಿಧಾನಸಭೆಯಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಉಪನಾಯಕ ಯು.ಟಿ. ಖಾದರ್ ಅವರು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ, ಸುರತ್ಕಲ್ ಬಳಿ ಅನಧಿಕೃತ ಟೋಲ್ ಸಂಗ್ರಹದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮಂಗಳೂರಿನ ಸುರತ್ಕಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಟೋಲ್ ಸಂಗ್ರಹ ಕೇಂದ್ರ ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ತಿಳಿಸಿದರು.
'ಮಂಗಳೂರಿನಲ್ಲಿ 60 ಕಿ.ಮೀ. ಅಂತರದಲ್ಲಿ ಮೂರು ಟೋಲ್ ಕೇಂದ್ರಗಳಿವೆ. ಸುರತ್ಕಲ್ ಟೋಲ್ ಪ್ಲಾಜಾ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದೆ. ಅದನ್ನು ತೆರವುಗೊಳಿಸುವಂತೆ ಆಗ್ರಹಿಸಿ ಮೂರು ದಿನಗಳಿಂದ ಧರಣಿ ನಡೆಯುತ್ತಿದೆ. ತಕ್ಷಣ ಟೋಲ್ ಪ್ಲಾಜಾ ತೆರವು ಮಾಡಬೇಕು' ಎಂದು ಯು.ಟಿ ಖಾದರ್ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, '60 ಕಿ.ಮೀ. ಅಂತರದೊಳಗೆ ಇರುವ ಟೋಲ್ ಸಂಗ್ರಹಣಾ ಕೇಂದ್ರಗಳನ್ನು ತೆರವುಗೊಳಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತೀರ್ಮಾನಿಸಿದೆ. ಈ ಕಾರಣದಿಂದ ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರವನ್ನು ತೆರವುಗೊಳಿಸಲು ಎನ್‌ಎಚ್‌ಎಐಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಅದನ್ನು ಪ್ರಾಧಿಕಾರ ಒಪ್ಪಿಕೊಂಡಿದೆ' ಎಂದರು.
ಸುರತ್ಕಲ್ ಬಳಿ ನವಯುಗ ಕನ್‌ಸ್ಟ್ರಕ್ಷನ್ಸ್ ಮತ್ತು ನವ ಮಂಗಳೂರು ಬಂದರು ರಸ್ತೆ ಕಂಪನಿಗಳು ರಸ್ತೆ ನಿರ್ಮಿಸಿವೆ. ಈ ಕಾರಣದಿಂದಾಗಿ 60 ಕಿ.ಮೀ. ಅಂತರದ ಮಧ್ಯದಲ್ಲಿ ಟೋಲ್ ಸಂಗ್ರಹಣಾ ಕೇಂದ್ರ ತೆರೆಯಲಾಗಿತ್ತು ಎಂದು ಹೇಳಿದರು.