ಬೆಂಗಳೂರು:ಮೀನುಗಾರರಿಗೆ ಹಾಗೂ ಸಮುದ್ರದ ತೀರ ನಿವಾಸಿಗಳಿಗೆ ಚಂಡಮಾರುತದ ರಕ್ಷಣೆ ನೀಡುವ ನಿಟ್ಟಿನಲ್ಲಿ ಚಂಡಮಾರುತದ ಬಗ್ಗೆ ಎಚ್ಚರಿಸುವ ಅಲಾರಾಂ ವ್ಯವಸ್ಥೆಯನ್ನು ಕರಾವಳಿಯಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ಕರಾವಳಿ ಪ್ರದೇಶದ ಒಟ್ಟು 40 ಕಡೆಗಳಲ್ಲಿ ಅಲಾರಾಂ ವ್ಯವಸ್ಥೆ ಅಳವಡಿಸಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಮಾತನಾಡಿದ ಅವರು, ಚಂಡಮಾರುತದ ಅಬ್ಬರದ ಬಗ್ಗೆ ಅಲರಾಂ ಮೂಲಕ ಎಚ್ಚರಿಕೆ ನೀಡುವ ಅಲರ್ಟ್ ಸಿಸ್ಟಮ್ ವ್ಯವಸ್ಥೆಯನ್ನು
ಕರಾವಳಿ ಭಾಗದ 40 ಕಡೆ ಅನುಷ್ಠಾನ ಮಾಡುತ್ತೇವೆ. ಕೇಂದ್ರ ಸರ್ಕಾರದಿಂದ ಇದಕ್ಕೆ ಹಣ ಬರಲಿದೆ. ಒಂದೊಂದು ಸಿಸ್ಟಂಗೆ 12 ಕೋಟಿ ರೂ. ಖರ್ಚಾಗುತ್ತದೆ. ಈ ಅಲಾರಾಂಗಳು ಆರೇಳು ಕಿಮೀವರೆಗೆ ಸೈರನ್ ಮಾಡಲಿದೆ ಎಂದರು.
ಈ ಮೂಲಕ ತೀರ ಪ್ರದೇಶದ ಜನರಿಗೆ, ಮೀನುಗಾರಿಗೆ ಚಂಡಮಾರುತಗಳ ಸುಳಿವನ್ನು ನೀಡಲಾಗುವುದು. ಇದರಿಂದ ಕರಾವಳಿ ಭಾಗದ ಜನರಿಗೆ ಅನುಕೂಲವಾಗಲಿದೆ ಅದರಲ್ಲೂ ಮೀನುಗಾರರಿಗೆ ಇದು ಹೆಚ್ಚು ಉಪಯೋಗವಾಗಲಿದೆ ಎಂದು ತಿಳಿಸಿದರು. ನಾನು ಈಗಾಗಲೇ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಒಂದೆರಡು ಭಾರಿ ನಾನು ಹೋಗಿದ್ದೇನೆ. ಪ್ರವಾಹ ಸಂದರ್ಭಗಳಲ್ಲಿ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.
ಇನ್ನು, ಸಿಡಿಲಿನಿಂದ ಹಲವರು ಸಾಯುತ್ತಿದ್ದಾರೆ. ಅದರ ಅಲರ್ಟ್ನೆಸ್ ಬಗ್ಗೆ ಯೋಜನೆ ಕೈಗೊಳ್ಳಲಾಗಿದೆ. ಒಂದೂವರೆ ಕಿಮೀವರೆಗೆ ಕೇಳಿಸುವಷ್ಟು
ಮೈಕ್ ಸಿಸ್ಟಂ ಮೂಲಕ ಅಲರ್ಟ್ ಮಾಡಲಾಗುತ್ತದೆ. ಗ್ರಾಮ ಪಂಚಾಯಿತಿಗಳಲ್ಲಿ ಅಲರ್ಟ್ ಆಗಲಿದೆ. ಈ ಹೊಸ ಸಿಸ್ಟಮ್ನ್ನು ಅಳವಡಿಕೆ ಮಾಡುತ್ತೇವೆ ಎಂದು ಆರ್ ಅಶೋಕ್ ತಿಳಿಸಿದರು.