ಬೆಂಗಳೂರು (ಆ.10): ಆಗಸ್ಟ್ 12ರವರೆಗೆ ಕರಾವಳಿ ಕರ್ನಾಟಕದ ಬಹುತೇಕ ಸ್ಥಳಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಹಲವೆಡೆ ಮತ್ತು ಉತ್ತರ ಒಳನಾಡಿನ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಅವಧಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇಲ್ಲ. ಆಗ್ನೇಯ ಅರಬ್ಬಿ ಸಮುದ್ರ, ಕೇರಳ ಕರಾವಳಿ ಮತ್ತು ಲಕ್ಷದ್ವೀಪ ಪ್ರದೇಶದಲ್ಲಿ ಗಾಳಿಯ ವೇಗ ಗಂಟೆಗೆ 40 ರಿಂದ 50 ಕಿಮೀ ತಲುಪುವ ಸಾಧ್ಯತೆಯಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಮಳೆಯಾಗುವ ಸಾಧ್ಯತೆಗಳಿವೆ. ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಉಳಿದಂತೆ ಸೋಮವಾರ ಬೆಳಗ್ಗೆ 8-30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ನೈಋುತ್ಯ ಮುಂಗಾರು ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು ಮತ್ತು ಉತ್ತರ ಒಳನಾಡು ಹಾಗು ಕರಾವಳಿಯಲ್ಲಿ ದುರ್ಬಲವಾಗಿತ್ತು. ಕರಾವಳಿಯ ಹಲವು ಕಡೆಗಳಲ್ಲಿ ಮತ್ತು ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿದೆ.
ಬೆಳಗಾವಿಯ ಕಟ್ಕೋಳ್ನಲ್ಲಿ 4 ಸೆಂ.ಮೀ, ಬಾಗಲಕೋಟೆಯ ಕೆರೂರು, ಕೊಡಗಿನ ಭಾಗಮಂಡಲ, ಮೈಸೂರಿನ ಸಾಲಿಗ್ರಾಮ, ಬೆಂಗಳೂರು ನಗರದ ಜ್ಞಾನಭಾರತಿ ಬಿಯು ಕ್ಯಾಂಪಸ್, ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ. ಉಡುಪಿಯ ಕೊಲ್ಲೂರು, ಕೋಲಾರ, ದಾವಣಗೆರೆಯ ಚನ್ನಗಿರಿಯಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ