Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತಾಯಿ ಯಶೋಧಾ (70), ಮಗಳು ಸುಮನ್ (41), ಮಗ ನರೇಶ್ ಗುಪ್ತಾ(36) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೇಲ್ನೋಟಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ನ ಮನೆಯೊಂದರಲ್ಲಿ ವಾಸವಾಗಿದ್ದ ತಾಯಿ, ಮಗಳು ಹಾಗೂ ಮಗ ಆತ್ಮಹತ್ಯೆ ಮಾಡಿಕೊಂಡಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೃತ ತಾಯಿ ಯಶೋಧಾರಿಗೆ ಮೂವರು ಮಕ್ಕಳಿದ್ದಾರೆ. ಈ ಪೈಕಿ ಒಬ್ಬ ಮಗಳು ಮದುವೆ ಆಗಿ ರಾಜಾಜಿನಗರದಲ್ಲಿ ನೆಲೆಸಿದ್ದಾಳೆ. ಮಗ ನರೇಶ್, ಮತ್ತೋರ್ವ ಪುತ್ರಿ ಸುಮನ್ ತಾಯಿ ಯಶೋಧಾ ಜತೆ ನೆಲೆಸಿದ್ದರು. ಆದ್ರೆ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೃತ ನರೇಶ್ ವೃತ್ತಿಯಲ್ಲಿ ಕಾಂಟ್ರಾಕ್ಟರ್ ಆಗಿದ್ದ. ಯಶೋಧರಿಗೆ ಸಂಬಂಧಿಕರು ಹಲವು ಬಾರಿ ಕರೆ ಮಾಡಿದ್ದು ಅವರು ಸ್ವೀಕರಿಸಿಲ್ಲ. ಈ ಹಿನ್ನೆಲೆ ಸಂಬಂಧಿಕರು ರಾಜಾಜಿನಗರದಲ್ಲಿರುವ 2ನೇ ಮಗಳಿಗೆ ಕಾಲ್ ಮಾಡಿ ತಿಳಿಸಿದ್ದಾರೆ. ನಂತರ ಮನೆ ಬಳಿ ಬಂದಾಗ ಚಪ್ಪಲಿ, ಕಾರ್ ಇರುವುದು ಪತ್ತೆಯಾಗಿದೆ. ಬಳಿಕ ಮನೆ ಒಳಗೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮಗಳು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ಪೊಲೀಸರು ಕುಟುಂಬಸ್ಥರ ದೂರಿಗಾಗಿ ಕಾಯುತ್ತಿದ್ದಾರೆ. ಮೃತದೇಹಗಳನ್ನು ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ. ಮಹಾಲಕ್ಷ್ಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನೆಡೆದಿದೆ.