ಹಾಸನ : ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆಯ ಅಬ್ಬರ ಕಡಿಮೆಯಾಗುತ್ತಿದೆ. ಈಗಾಗಲೇ ಎರಡನೇ ಅಲೆ ಸೋಂಕಿನಿಂದ ಕಂಗೆಟ್ಟಿರುವ ಜಿಲ್ಲೆಯಲ್ಲಿ ಮಕ್ಕಳಲ್ಲಿ ಸೋಂಕು ಅಧಿಕ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತಷ್ಟು ಆತಂಕ ಉಂಟು ಮಾಡಿದೆ.
ಜಿಲ್ಲೆಯಲ್ಲಿ ಏಳು ಸಾವಿರಕ್ಕೂ ಅಧಿಕ ಮಂದಿ ಕೊರೊನಾ ಎರಡನೇ ಅಲೆಗೆ ತುತ್ತಾಗಿದ್ದು, ಇದು ಹೆಚ್ಚಿನ ಕಳವಳ ಉಂಟು ಮಾಡಿದೆ. 2021 ರ ಮಾರ್ಚ್ 22 ರಿಂದ ಜೂನ್ 23 ರವರೆಗೆ 7747 ಮಂದಿ 18 ವರ್ಷ ಒಳಗಿನವರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 11 ರಿಂದ 18 ವರ್ಷದೊಳಗಿನವರೇ ಹೆಚ್ಚಿರುವುದು ಆತಂಕಕಾರಿ ಸಂಗತಿಯಾಗಿದೆ. ಅದರಲ್ಲೂ ಹಾಸನ ತಾಲೂಕಿನಲ್ಲಿಯೇ ಅತೀ ಹೆಚ್ಚು ಅಂದರೆ 2409 ಮಕ್ಕಳಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.
ಇನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ ಒಂದೇ ತಿಂಗಳು ಅಂದರೆ ಜೂನ್ ತಿಂಗಳಿನಲ್ಲಿ 1843 ಮಕ್ಕಳಲ್ಲಿ ಕೊರೊನ ವೈರಸ್ ಸೋಂಕು ಕಾಣಿಸಿಕೊಂಡಿದೆ. ಜೂನ್ ತಿಂಗಳಿನಲ್ಲಿ ಹಾಸನ ತಾಲೂಕಿನಲ್ಲಿಯೇ ಅತೀ ಹೆಚ್ಚು ಅಂದರೆ 520 ಮಕ್ಕಳಿಗೆ ಸೋಂಕು ತಗುಲಿದೆ. ಜಿಲ್ಲಾ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಹಾಸನ ಜಿಲ್ಲೆಯಾದ್ಯಂತ 11 ರಿಂದ 18 ವಯಸ್ಸಿನ ಮಕ್ಕಳೇ ಅತೀ ಹೆಚ್ಚು ಸೋಂಕಿಗೆ ತುತ್ತಾಗುತ್ತಿದ್ದಾರೆ. ಇದುವರೆಗೂ ಹಾಸನ ಜಿಲ್ಲೆಯಲ್ಲಿ 5021 ಈ ವಯಸ್ಸಿನ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದ್ದು ಪೋಷಕರ ವಲಯದಲ್ಲಿ ಆತಂಕ ಸೃಷ್ಠಿಸಿರುವುದು ಸುಳ್ಳಲ್ಲ.