ಬೆಂಗಳೂರು : ನಾವೀಗ ಲೋಕಸಭಾ ಚುನಾವಣೆಗೆ ಹೋಗುತ್ತಿದ್ದೇವೆ. ಇವೆಲ್ಲವೂ ಚುನಾವಣಾ ಕಾರ್ಯತಂತ್ರದ ಭಾಗವಾಗಿದೆ. ನನ್ನ ಮಟ್ಟಿಗೆ ಈಗಲೂ ಸಹ ಅವರು ಬಿಜೆಪಿ ಪಕ್ಷದವರೇ ಆಗಿದ್ದಾರೆ. ನಮ್ಮ ಮುಖಂಡರನ್ನು ಭೇಟಿಯಾದ ಕೂಡಲೇ ಕಾಂಗ್ರೆಸ್ ಪಕ್ಷದವರಾಗಲು ಸಾಧ್ಯವಿಲ್ಲ ಎಂದು ಟಿ.ಬಿ. ಜಯಚಂದ್ರ ಹೇಳಿದ್ದಾರೆ.ಜೊತೆಗೆ, ಅಂತಿಮವಾಗಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕೋ ಬೇಡವೋ ಎಂಬುದು ನಮ್ಮ ರಾಜ್ಯಾಧ್ಯಕ್ಷರು ಹಾಗೂ ಸಿಎಂ ವಿವೇಚನೆಗೆ ಬಿಟ್ಟಿದ್ದು ಎಂದು ನುಡಿದ ಜಯಚಂದ್ರ, ಸ್ಥಳೀಯವಾಗಿ ಸಾಕಷ್ಟು ಆಕಾಂಕ್ಷಿಗಳಿರುವುದಾಗ ಹೊರಗಿನಿಂದ ಬಂದವರಿಗೆ ಟಿಕೆಟ್ ಸಿಗುವ ಸಾಧ್ಯತೆಗಳಿಲ್ಲ ಎಂದು ನುಡಿದರು. ಜಯಚಂದ್ರ ಅವರ ಪುತ್ರ ಸಂಜಯ್ ಕೂಡ ಕಾಂಗ್ರೆಸ್ ಎಂಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮಾಜಿ ಶಾಸಕ ಈಗ ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವ ಬಗ್ಗೆ ಕೈಮುಖಂಡರಿಂದಲೇ ಅಸಮಾಧಾನ ವ್ಯಕ್ತವಾಗತೊಡಗಿದೆ. ಈಗ ಮಾಜಿ ಸಚಿವ ಟಿ.ಬಿ . ಜಯಚಂದ್ರ ಅವರು, ಮುದ್ದಹನುಮೇ ಗೌಡರ ಕಾಂಗ್ರೆಸ್ ಸೇರ್ಪಡೆಗೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಮುದ್ದಹನುಮೇಗೌಡರು ಇತ್ತೀಚಿಗಷ್ಟೇ ಕಾಂಗ್ರೆಸ್ ಸಚಿವ ಕೆ.ಎನ್. ರಾಜಣ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಅವರೊಂದಿಗೆ ಸಂಭಾಷಣೆ ನಡೆಸಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಹಲವು ಕಾಂಗ್ರೆಸ್ ಮುಖಂಡರು ಬೇಕೆಂದಾಗ ಬರಲು, ಬೇಡವಾದಾಗ ತೊರೆಯಲು ಕಾಂಗ್ರೆಸ್ ಪಕ್ಷವು ಸರ್ಕಾರಿ ಬಸ್ ಅಲ್ಲ ಎಂದು ಕಿಡಿ ಕಾರಿದ್ದರು.