ಅಲ್ಲಿ 130 ಜನ ಸಿಬ್ಬಂದಿ ಇದ್ದಾರೆ. ಕಳೆದ 12 ವರ್ಷಗಳಿಂದ ಅವರದ್ದು ಒಂದೇ ಕೆಲಸ. ಅವರು ಭದ್ರತೆ ನೀಡಿದರೆ ಈಗ ಅವರಿಗೆ ಭದ್ರತೆ ಬೇಕಾಗಿದೆ. ಏನೀ ಸ್ಟೋರಿ? ಮುಂದೆ ನೋಡಿ…
ಉತ್ತರ ಕರ್ನಾಟಕದ ಗದಗ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿ 12 ವರ್ಷದಿಂದ ಪವನ ವಿದ್ಯುತ್ ಯಂತ್ರಗಳನ್ನು 130 ಸಿಬ್ಬಂದಿ ಕಾಯುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಸರ್ಕಾರಿ ಸೌಲಭ್ಯಗಳೊಂದಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಸುಲ್ಜಾನ್ ಕಂಪನಿ ಭದ್ರತಾ ಸಿಬ್ಬಂದಿಗಳ ಹೋರಾಟ ಸಮಿತಿ ಸಂಚಾಲಕ ರವಿಕಾಂತ್ ಅಂಗಡಿ ಆಗ್ರಹಿಸಿದ್ದಾರೆ.
12 ವರ್ಷಗಳಿಂದ ಈ ಭದ್ರತಾ ಸಿಬ್ಬಂದಿ ನೇಮಕಾತಿ ಹಾಗೂ ನಿರ್ವಹಣೆಯನ್ನು ಸುಲ್ಜಾನ್ ಕಂಪೆನಿಯು ಹೊರ ಏಜನ್ಸಿಗೆ ನೀಡುತ್ತಾ ಬಂದಿದೆ. ಆರಂಭದಲ್ಲಿ 1,200 ರೂಪಾಯಿ ಸಂಬಳ ಪಡೆಯುತ್ತಿದ್ದ ಸಿಬ್ಬಂದಿ, ಈಗ ₹6,500 ವೇತನ ಪಡೆಯುತ್ತಿದ್ದಾರೆ. ಸಿಬ್ಬಂದಿಗೆ ಸಿಗುವ ಸಂಬಳದಲ್ಲಿ ಕುಟುಂಬ ನಿರ್ವಹಣೆ ಮಾಡಲಾಗುತ್ತಿಲ್ಲ. ವಾರದ ರಜೆ ಸಹಿತ ನೀಡುತ್ತಿಲ್ಲ. ಕಾರ್ಮಿಕ ಕಾಯ್ದೆಯಂತೆ ಕನಿಷ್ಠ ವೇತನವನ್ನೂ ನೀಡುತ್ತಿಲ್ಲ. ಗ್ರ್ಯಾಚೂಟಿ, ಪಿಎಫ್ ಸೇರಿದಂತೆ ಯಾವ ಸೌಲಭ್ಯಗಳೂ ದೊರೆಯುತ್ತಿಲ್ಲ.
ಸಮಸ್ಯೆಗಳ ಕುರಿತು ಗುತ್ತಿಗೆ ಪಡೆದ ಏಜೆನ್ಸಿ ಮತ್ತು ಸುಲ್ಜಾನ್ ಕಂಪನಿ ಗಮನಕ್ಕೆ ತಂದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅಲ್ಲದೇ ಇಷ್ಟು ವರ್ಷ ಕೆಲಸ ಮಾಡಿದ ಸಿಬ್ಬಂದಿಯನ್ನು ಏಕಾಏಕಿ ಸೆಪ್ಟೆಂಬರ್ ತಿಂಗಳೊಳಗೆ ಕೆಲಸದಿಂದ ತೆಗೆದು ಹಾಕುವ ನೋಟಿಸ್ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಬ್ಬಂದಿಯ ನೆರವಿಗೆ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಹಾಗೂ ಸುಲ್ಜಾನ್ ಕಂಪನಿ ಮುಂದಾಗಬೇಕು. 12 ವರ್ಷದಿಂದ ಸಿಬ್ಬಂದಿಗೆ ಸಿಗಬೇಕಾದ ಎಲ್ಲಾ ಸೌಲಭ್ಯ ಹಾಗೂ ಸೂಕ್ತ ಭದ್ರತೆ ಒದಗಿಸುವ ಮೂಲಕ ಕೆಲಸದಲ್ಲಿ ಮುಂದುವರೆಸಬೇಕು. ಕಾರ್ಮಿಕ ಕಾಯ್ದೆಯಂತೆ ಕನಿಷ್ಟ ವೇತನ ನೀಡಬೇಕು ಎಂದು ಆಗ್ರಹಿಸಿದರು.