ಬೆಂಗಳೂರು: ರಾಹುಲ್ ಗಾಂಧಿಯವರು ಕನ್ವರ್ಷನ್ ಮಾಫಿಯದ ಕೈಗೊಂಬೆಯಾಗಿ ಸದನದಲ್ಲಿ ಹಿಂದೂ ವಿರೋಧಿಯಾಗಿ ಹೇಳಿಕೆ ಕೊಟ್ಟಿರುವ ಸಾಧ್ಯತೆ ಇದೆ. ಅವರ ಈ ಹೇಳಿಕೆ ಹಿಂದೆ ಕುಟುಂಬದ ಡಿಎನ್‌ಎ ಕೂಡ ಕಾರಣವಾಗಿರುಬಹುದು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ವಿಶ್ಲೇಷಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇವರ ಮುತ್ತಾತ ಸನ್ಮಾನ್ಯ ದಿವಂಗತ ಜವಾಹರ ಲಾಲ್ ನೆಹರೂ ಅವರು 'ನನ್ನನ್ನು ಕತ್ತೆ ಎಂದು ಬೇಕಾದರೂ ಕರೆಯಿರಿ. ಹಿಂದೂ ಎಂದು ಕರೆಯಬೇಡಿ' ಎಂದಿದ್ದರು.
ಆ ಡಿಎನ್‍ಎ ಪ್ರಭಾವವೂ ಇರಬಹುದು; ಅಥವಾ ಕನ್ವರ್ಷನ್ ಮಾಫಿಯದ ಕೈಗೊಂಬೆಯಾಗಿರುವ ಕಾರಣಕ್ಕೂ ಇರಬಹುದು. ವಿರೋಧ ಪಕ್ಷದ ನಾಯಕನಾಗಿ ಸಾಂವಿಧಾನಿಕ ಹುದ್ದೆಯಲ್ಲಿದ್ದು ಹಿಂದೂ ದ್ವೇಷವನ್ನು ತೋರಿಸಿದ್ದಾರೆ ಎಂದು ಟೀಕಿಸಿದರು.
1947ರಲ್ಲಿ ಭಾರತದ ವಿಭಜನೆಗೆ ಕಾರಣವಾದ ಸಿದ್ಧಾಂತ ಯಾವುದು? ಕೋಟ್ಯಂತರ ಜನರನ್ನು ನಿರ್ವಸಿತರನ್ನಾಗಿ ಮಾಡಿದ್ದು, ಲಕ್ಷಾಂತರ ಜನರ ಮಾರಣಹೋಮಕ್ಕೆ ಕಾರಣವಾದ ಸಿದ್ಧಾಂತ ಯಾವುದು? ತನ್ನ ರಾಜಕೀಯ ಲಾಭ, ಸ್ವಾರ್ಥಕ್ಕಾಗಿ ದೇಶ ವಿಭಜನೆಗೆ ಸಹಿ ಹಾಕಿದ ಪಾರ್ಟಿ ಯಾವುದು? ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆ ಬೆಳೆಯಲು ಪೂರಕ ವಾತಾವರಣ ಸೃಷ್ಟಿಸಿದ ಪಕ್ಷ ಯಾವುದು? ಅಲ್ಲಿನ ಮೂಲನಿವಾಸಿಗಳು ನಿರಾಶ್ರಿತರಾಗಲು ಕಾರಣರು ಯಾರು? ಪಂಜಾಬ್‍ನಲ್ಲಿ ಭಿಂದ್ರನ್‍ವಾಲೆಯನ್ನು ಬೆಳೆಸಿ, ಖಲಿಸ್ಥಾನ್ ಚಳವಳಿಗೆ ಶಕ್ತಿ ಕೊಟ್ಟ ವ್ಯಕ್ತಿ ಮತ್ತು ಪಕ್ಷ ಯಾವುದು? ದಕ್ಷಿಣದಲ್ಲಿ ಎಲ್‍ಟಿಟಿಇಯಂಥ ಭಯೋತ್ಪಾದಕ ಸಂಘಟನೆಗೆ ಶಕ್ತಿ ಕೊಟ್ಟು, ಅದನ್ನು ಬೆಳೆಸಿದ ಪಕ್ಷ ಯಾವುದು?- ಇದೆಲ್ಲದಕ್ಕೂ ಉತ್ತರ ಹುಡುಕಿದರೆ ಕಾಂಗ್ರೆಸ್ ಪಕ್ಷ, ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರು ಕಣ್ಮುಂದೆ ಬರುತ್ತಾರೆ. ಇವರೆಲ್ಲರೂ ನಿಮ್ಮ ಕಾಂಗ್ರೆಸ್ ಪಕ್ಷದವರು. ಇವರ್ಯಾರೂ ಆರೆಸ್ಸೆಸ್‍ನವರಲ್ಲ ಎಂದು ನುಡಿದರು.
ಸರ್ವಾಧಿಕಾರದ ಕಾರಣಕ್ಕೆ ತುರ್ತು ಪರಿಸ್ಥಿತಿ..
1975ರಲ್ಲಿ ತುರ್ತು ಪರಿಸ್ಥಿತಿ ಹೇರಿ, 1.20 ಲಕ್ಷಕ್ಕೂ ಹೆಚ್ಚು ಜನರನ್ನು ಮೀಸಾ ಬಂಧಿಗಳನ್ನಾಗಿ ಮಾಡಿ, ಮೂರೂವರೆ ಸಾವಿರಕ್ಕೂ ಹೆಚ್ಚು ಪತ್ರಕರ್ತರನ್ನು ಮೀಸಾ ಬಂಧಿಗಳನ್ನಾಗಿ ಮಾಡಿ, ನಾಗರಿಕ ಹಕ್ಕುಗಳನ್ನು ದಮನ ಮಾಡಿ, ಸಂವಿಧಾನವನ್ನು ಬುಡಮೇಲು ಮಾಡಿ, ಸರ್ವಾಧಿಕಾರ ಹೇರಿದ ಪಕ್ಷ ಯಾವುದು ಎಂದು ಸಿ.ಟಿ.ರವಿ ಅವರು ಪ್ರಶ್ನೆಯನ್ನು ಮುಂದಿಟ್ಟರು.
ಇದಕ್ಕೆ ಆರೆಸ್ಸೆಸ್ ಕಾರಣವೇ ಅಥವಾ ನಿಮ್ಮ ಮುತ್ತಜ್ಜಿಯ ಸ್ವಾರ್ಥ, ದುರಾಸೆ, ಸರ್ವಾಧಿಕಾರದ ಕಾರಣಕ್ಕೆ ತುರ್ತು ಪರಿಸ್ಥಿತಿ ಹೇರಿದರೇ? ಎಂದು ಕೇಳಿದರು. ಹುಡುಕಿದಾಗ ಇದಕ್ಕೆ ನಿಮ್ಮ ಅಜ್ಜಿಯೇ (ಇಂದಿರಾ ಗಾಂಧಿ), ನಿಮ್ಮ ಪಾರ್ಟಿಯೇ ಕಾರಣ ಎಂಬ ಉತ್ತರ ಲಭಿಸುತ್ತದೆ ಎಂದು ತಿಳಿಸಿದರು.
1984ರಲ್ಲಿ ದೆಹಲಿ ಮತ್ತು ದೇಶದ ಅನೇಕ ಕಡೆ ನಡೆದ ಸಿಕ್ಖರ ಮೇಲಿನ ದೌರ್ಜನ್ಯವನ್ನು ಆರೆಸ್ಸೆಸ್ ಮಾಡಿದ್ದಲ್ಲ. ನಿಮ್ಮ ಪಾರ್ಟಿಯ ಇಂದಿರಾ ಬ್ರಿಗೇಡ್‍ನವರು, ಯೂತ್ ಕಾಂಗ್ರೆಸ್ಸಿನವರು, ಎನ್‍ಎಸ್‍ಯುಐ ನವರು, ನಿಮ್ಮ ಕುಟುಂಬದ ಗುಲಾಮರಂತೆ ವರ್ತಿಸುವ ಜನರ ದಬ್ಬಾಳಿಕೆ ಅದು. ಆರೆಸ್ಸೆಸ್ ಮಾಡಿದ್ದಲ್ಲ ಎಂದು ವಿಶ್ಲೇಷಿಸಿದರು<>