ಕೊಪ್ಪಳ : ಬೆಂಕಿ ಪೊಟ್ಟಣ ಕಳ್ಳತನ ಮಾಡಿದ್ದಾನೆ ಎಂಬ ಆರೋಪ ಮಾಡಿದ್ದಕ್ಕೆ ಮನನೊಂದು 20 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳ ತಾಲೂಕಿನ ಜಿನ್ನಾಪುರ ತಾಂಡಾದಲ್ಲಿ ನಡೆದಿದೆ.
ರಾಜೇಶ್(20) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದು, ಈತ ಹೊಲಕ್ಕೆ ನೀರು ಕಟ್ಟಲು ಹೋಗುವಾಗ ಬೆಂಕಿಪೊಟ್ಟಣ ಇಲ್ಲದ ಕಾರಣಕ್ಕೆ ಪಕ್ಕದಲ್ಲೆ ಇರುವ ಬುಡ್ಡಪ್ಪ ಎಂಬವರ ಹೋಟೆಲ್ ಗೆ ಬಂದು ಅಲ್ಲೆ ಇದ್ದ ಬೆಂಕಿ ಪೊಟ್ಟಣ ತೆಗೆದುಕೊಂಡು ಹೋಗಿದ್ದಾನೆ. ಆಗ ಹೋಟೆಲ್ ಮಾಲೀಕರಾದ ಬುಡ್ಡಪ್ಪ, ಶೇಖರಪ್ಪ, ಶಾಂತಮ್ಮ, ಲಕ್ಷ್ಮಿ ಎಂಬವರು ರಾಜೇಶನನ್ನು ಹಿಡಿದು, ಬೆಂಕಿಪೊಟ್ಟಣ ಕಳವು ಮಾಡುತ್ತೀಯಾ ಎಂದು ಥಳಿಸಿದ್ದಾರೆ.
ಈ ಘಟನೆಯಿಂದ ಮನನೊಂದ ರಾಜೇಶ್ ಕೆಲ ಹೊತ್ತಿನಲ್ಲೇ ತಮ್ಮ ಹೊಲಕ್ಕೆ ಹೋಗಿ ಅಲ್ಲೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಂದು ಚಿಕ್ಕ ಬೆಂಕಿ ಪೊಟ್ಟಣ ತೆಗೆದುಕೊಂಡಿದ್ದಕ್ಕೆ ಮಗನಿಗೆ ಕಳ್ಳನೆಂದು ಅವಮಾನ ಮಾಡಿ ಆತ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾರೆಂದು ರಾಜೇಶ್ ತಂದೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಹೋಟೆಲ್ ಮಾಲೀಕರಾದ ಬುಡ್ಡಪ್ಪ, ಶೇಖರಪ್ಪ, ಶಾಂತಮ್ಮ, ಲಕ್ಷ್ಮಿ ಎಂಬವರು ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನಲೆಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.