ಚೈತ್ರಾ ಕುಂದಾಪುರ ಡೀಲ್ ಪ್ರಕರಣ ಸಂಬಂಧ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.. ಮಂಗಳೂರಿನಲ್ಲಿ ಮಾತನಾಡಿದ ಅವರು, ಹಣವೇ ಬಿಜೆಪಿಯಲ್ಲಿ ಪ್ರಧಾನ ಅಲ್ಲ, ಹಾಗಿದ್ದರೆ ನೂರಾರು ಬಡ ಕಾರ್ಯಕರ್ತರು ನಮ್ಮಲ್ಲಿ ಸಂಸದರು, ಶಾಸಕರು ಆಗುತ್ತಿರಲಿಲ್ಲ ಎಂದರು. ಬಿಜೆಪಿಯಲ್ಲಿ ಹಣವೇ ಪ್ರಧಾನವಾಗಿದ್ದರೆ ಬೈಂದೂರಿನ ಟಿಕೆಟ್ ಬಡ ಕಾರ್ಯಕರ್ತ ಗುರುರಾಜ್ ಶೆಟ್ಟಿ ಗಂಟಿಹೊಳೆ, ಸುಳ್ಯದ ಟಿಕೆಟ್ ಬಡ ಮಹಿಳೆ ಭಾಗೀರಥಿ ಮುರುಳ್ಯ ಅವರಿಗೆ ಸಿಗುತ್ತಿರಲಿಲ್ಲ. ಕೋಟಾ ಶ್ರೀನಿವಾಸ್ ಪೂಜಾರಿ, ಸುನೀಲ್ ಕುಮಾರ್, ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ ಅವರು ನಾಯಕರಾಗುತ್ತಿರಲಿಲ್ಲ ಎಂದರು. ಚೈತ್ರಾ ಕುಂದಾಪುರ ಪ್ರಕರಣದಲ್ಲಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರನ್ನು ಮೋಸ ಮಾಡಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿಯಂಥ ಬುದ್ದಿವಂತರ ಜಿಲ್ಲೆಯವರೇ ಮೋಸ ಹೋಗಿದ್ದಾರೆ. ಅವರು ನೇರವಾಗಿ ಫೋನ್ ಮಾಡಿದರೂ ಬಿಜೆಪಿ ನಾಯಕರು ಸಂಪರ್ಕಕ್ಕೆ ಸಿಗುತ್ತಿದ್ದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯೇ ಅವರ ಜೊತೆ ತುಳು ಭಾಷೆಯಲ್ಲೇ ಮಾತಾಡುತ್ತಿದ್ದರು. ನಳಿನ್ ಕುಮಾರ್ ಕಟೀಲ್, ಕೋಟಾ ಶ್ರೀನಿವಾಸ ಪೂಜಾರಿಯೂ ಮಾತಾಡುತ್ತಿದ್ದರು ಎಂದರು. ಈ ಪ್ರಕರಣದ ಬಗ್ಗೆ ಸತ್ಯ ಬಹಿರಂಗ ಆಗಬೇಕು, ಸಮಗ್ರ ತನಿಖೆ ಆಗಬೇಕು. ಯಾರೇ ಇದ್ದರೂ ಸೂಕ್ತ ತನಿಖೆ ನಡೆದು ಕ್ರಮ ಆಗಲಿ. ಯಾರದ್ದೋ ಹೆಸರು ಕೇಳಿ ಬರುತ್ತಿದೆ ಅನ್ನೋದು ಬೇರೆ. ಮೊದಲು ಸಮಗ್ರ ತನಿಖೆ ಆಗಲಿ ಎಂದರು.