ಬೆಂಗಳೂರು : ರಾಜ್ಯದಲ್ಲಿ ಸದ್ಯಕ್ಕೆ ಸಾರಿಗೆ ಸಿಬ್ಬಂದಿ ಮತ್ತು ಸರ್ಕಾರದ ನಡುವಿನ ತಿಕ್ಕಾಟ ಮುಗಿಯುವ ಹಾಗೆ ಕಾಣುತ್ತಿಲ್ಲ.
ಸರ್ಕಾರದ ವಿರುದ್ಧ ಮತ್ತೆ ಸಮರ ಸಾರಿರುವ ಸಾರಿಗೆ ನೌಕರರು ಸಾರಿಗೆ ಇಲಾಖೆ ಮುಂದೆ ಮಾಡು ಇಲ್ಲವೇ ಮಡಿ ಆಯ್ಕೆ ಇಟ್ಟಿದ್ದಾರೆ.
ಚುನಾವಣಾ ಹೊತ್ತಲ್ಲೇ ಮತ್ತೆ ಸಾರಿಗೆ ನೌಕರರು ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ. ಕಳೆದ ತಿಂಗಳಷ್ಟೇ ಸರ್ಕಾರವನ್ನು ಎಚ್ಚರಿಸುವ ನಿಟ್ಟಿನಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದ ಸಾರಿಗೆ ನೌಕರರ ಒಕ್ಕೂಟ, ಈಗ ಮತ್ತೊಮ್ಮೆ ತಮ್ಮ ಬೇಡಿಕೆ ಈಡೇರಿಕೆಗೆ ಡೆಡ್ ಲೈನ್ ನೀಡಿದೆ.
ಫೆಬ್ರವರಿ ಅಂತ್ಯದೊಳಗೆ ತಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿದಿದ್ದರೆ ಮತ್ತೊಮ್ಮೆ ರಸ್ತೆಗೆ ಇಳಿದು ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ. ಸರ್ಕಾರದ ಮುಂದೆ ನೌಕರರ ಒಕ್ಕೂಟ ಎರಡು ಆಯ್ಕೆಗಳನ್ನು ಮುಂದಿಟ್ಟಿದೆ.
ಒಂದು ತಮ್ಮ ಬೇಡಿಕೆಗಳಿಗೆ ಒಪ್ಪಬೇಕು. ಎರಡನೇಯದು ಸರ್ಕಾರ ಬೇಡಿಕೆಗೆ ಒಪ್ಪದಿದ್ದರೆ ಪ್ರತಿಭಟನೆಯನ್ನು ಎದುರಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಇದೇ ತಿಂಗಳು ಆರಂಭವಾಗುವ ವಿಧಾನಸಭಾ ಕಲಾಪದಲ್ಲಿ ಈ ಎಲ್ಲಾ ವಿಚಾರಗಳನ್ನು ಚರ್ಚೆ ಮಾಡಿ, ತೀರ್ಮಾನ ಪ್ರಕಟಿಸುವಂತೆ ಆಗ್ರಹ ಮಾಡಿದ್ದು, ಈ ತಿಂಗಳೇ ಸರ್ಕಾರಕ್ಕೆ ಡೆಡ್ಲೈನ್ ಅಂತಾ ಎಚ್ಚರಿಕೆ ನೀಡಿದ್ದಾರೆ.