ಬೆಂಗಳೂರು : ಕರ್ನಾಟಕದ ಭದ್ರಾ ಮೇಲ್ಡಂಡೆ ಯೋಜನೆಗೆ ಕೇಂದ್ರದ ಬಜೆಟ್ನಲ್ಲಿ ಬಂಪರ್ ಕೊಡುಗೆ ಸಿಕ್ಕಿದೆ. ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡುವುದರ ಜೊತೆಗೆ 5,300 ಕೋಟಿಯನ್ನು ಬಂಪರ್ ಗಿಫ್ಟ್ ಕೊಟ್ಟಿದೆ ಮೋದಿ ಸರ್ಕಾರ.
ಭದ್ರಾ ಮೇಲ್ಡಂಡೆ ಯೋಜನೆಯಿಂದ ನಾಲ್ಕು ಜಿಲ್ಲೆಗಳ ಜನರಿಗೆ ಅನುಕೂಲ ಆಗಲಿದೆ. ಭದ್ರಾ ಮೇಲ್ದಂಡೆ ಯೋಜನೆಯಿಂದ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳ 5,57,022 ಎಕರೆ ಭೂಪ್ರದೇಶಕ್ಕೆ ನೀರಾವರಿ ಕಲ್ಪಿಸಬಹುದಾಗಿದೆ.
ಒಟ್ಟು ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ 367 ಕೆರೆಗಳಿಗೆ ನೀರನ್ನು ತುಂಬಿಸುವ ಯೋಜನೆಯೂ ಇದರ ವ್ಯಾಪ್ತಿಯಲ್ಲಿ ಬರಲಿದೆ. ಅಂದಹಾಗೆ 29.9 ಟಿಎಂಸಿ ನೀರು ಬಳಕೆಗೆ ಯೋಜನೆಗೆ ಅನುಮತಿ ನೀಡಲಾಗಿದೆ.
ಯೋಜನೆ ಬ್ಲೂ ಪ್ರಿಂಟ್ ಏನು?
ತುಂಗಾ ನದಿಯಿಂದ 17.40 ಟಿ.ಎಂ.ಸಿ. ನೀರನ್ನು ಎರಡು ಹಂತಗಳಲ್ಲಿ ಲಿಫ್ಟ್ ಮಾಡುವುದು. ಭದ್ರಾ ಜಲಾಶಯಕ್ಕೆ ನೀರು ಹರಿಸುವುದು, ಭದ್ರಾ ಜಲಾಶಯದಿಂದ 29.90 ಟಿ.ಎಂ.ಸಿ. ನೀರನ್ನು ಎರಡು ಹಂತಗಳಲ್ಲಿ ಲಿಫ್ಟ್ ಮಾಡುವುದಾಗಿದೆ. ಅಜ್ಜಂಪುರ ಸುರಂಗದವರೆಗೆ ಕೊಂಡೊಯ್ಯುವುದು ಮತ್ತು ಅಜ್ಜಂಪುರ ಸುರಂಗ ಮಾರ್ಗದ ಮೂಲಕ ಚಿತ್ರದುರ್ಗ ಶಾಖಾ ಕಾಲುವೆ ಹಾಗೂ ತುಮಕೂರು ಶಾಖಾ ಕಾಲುವೆಗಳಿಗೆ ನೀರು ಹರಿಸುವ ಯೋಜನೆ ಆಗಿದೆ.