"ತೋಳ ಬಂತು ತೋಳ" ಕಥೆ ಕೇಳಿದಿರಲ್ವಾ...ಹಾಗೆ ಇಲ್ಲೊಂದು ಜಿಲ್ಲೆಯಲ್ಲಿ "ಹುಲಿ ಬಂತು ಹುಲಿ" ಅನ್ನೋ ಸುಳ್ಳು ಕಥೆ ಸೃಷ್ಠಿಯಾಗಿದೆ.
ಗದಗ ಜಿಲ್ಲೆಯ ವಾಟ್ಸಪ್ ಗ್ರೂಪ್ ಗಳಲ್ಲಿ ಮತ್ತು ಫೇಸಬುಕ್ ನಲ್ಲಿ ಇಂಥಹದ್ದೊಂದು ಸುಳ್ಳು ಕಥೆ ಸೃಷ್ಠಿಯಾಗಿದೆ. ಶನಿವಾರ ರಾತ್ರಿಯಿಂದಲೇ ವಾಟ್ಸ ಅಪ್, ಫೇಸ್ ಬುಕ್ ನಂಥ ಸಾಮಾಜಿಕ ಜಾಲತಾಣ ಓಪನ್ ಮಾಡಿದ್ರೆ ಸಾಕು ಈ ಸುಳ್ಳು ಸುದ್ದಿ ಹರಿದಾಡ್ತಿದ್ದು, ಜಿಲ್ಲೆಯ ಜನತೆಗೆ ಭಯದ ವಾತಾವರಣ ಸೃಷ್ಠಿಯಾಗುವಂತೆ ಮಾಡಿದೆ. ಅಲ್ಲದೇ ಗದಗ ಜಿಲ್ಲೆಯ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ ಇದಕ್ಕೆ ಪೂರಕವಾಗಿದ್ದು, ಸುಳ್ಳು ಸುದ್ದಿಗೆ ಮತ್ತಷ್ಟು ರೆಕ್ಕೆಪುಕ್ಕ ಬರುವಂತೆ ಮಾಡಿದೆ. ಯಾರೋ ಕಿಡಿಗೇಡಿಗಳು ರಸ್ತೆಯೊಂದರ ಮೇಲೆ ಸಂಚರಿಸುವ ಎಲ್ಲಿಯದೋ ಹುಲಿ ಫೋಟೋವನ್ನು ವಾಟ್ಸಪ್ ನಲ್ಲಿ ಹರಿಬಿಟ್ಟು ಬಿಂಕದ ಕಟ್ಟಿಯಲ್ಲಿರುವ ಝೂ ನಿಂದ ಹುಲಿಯೊಂದು ತಪ್ಪಿಸಿಕೊಂಡು ಹುಬ್ಬಳ್ಳಿ ರಸ್ತೆಗೆ ಬಂದಿದೆ ಅಂತ ಸುಳ್ಳು ಸುದ್ದಿ ಹರಿಬಿಟ್ಟಿದ್ದಾರೆ. ಪರಿಣಾಮ ಸುದ್ದಿ ತಿಳಿದ ಅದೆಷ್ಟೋ ಜನರು ರಾತ್ರಿ ವೇಳೆ ಹೊರಗೆ ಬರೋ ಸಾಹಸ ಮಾಡಿಲ್ಲ.
ಅಲ್ಲದೇ ಗದಗನ ಸುತ್ತಮುತ್ತಲಿನ ಗುಡ್ಡಗಾಡಿನ ಗ್ರಾಮೀಣ ಜನರು ಸಹ ಇದರಿಂದ ಭಯ ಭೀತರಾಗಿದ್ದಾರೆ. ಆದರೆ ಸುಳ್ಳು ಸುದ್ದಿಯ ಕೇಂದ್ರಬಿಂದು ಬಿಂಕದಕಟ್ಟಿ ಹುಲಿರಾಯ ಮಾತ್ರ ತನ್ನ ಪಾಡಿಗೆ ತಾನು ಬಿಂಕದಕಟ್ಟಿ ಝೂ ನಲ್ಲಿ ಇದೆ ಅನ್ನೋದು ಧಡಪಟ್ಟಿದೆ. ಆದರೆ ಈ ತರಹ ಸುಳ್ಳು ಸುದ್ದಿಯನ್ನು ಹರಿಬಿಟ್ಟಿದ್ದು ಯಾರು ಅನ್ನೋದು ಮಾತ್ರ ಈ ವರೆಗೂ ತಿಳಿದುಬಂದಿಲ್ಲ. ಅಲ್ಲದೇ ಗದಗನ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ಸಂತೋಷಬಾಬು, ಮಾಧ್ಯಮದವರಿಗೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಜನತೆಗೆ ಗೊಂದಲಕ್ಕೆ ಒಳಗಾಗುವುದು ಬೇಡ ಅಂತ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ಆದರೆ ಅದೇನೆ ಇರಲಿ, ಗದಗ ನಗರದಲ್ಲಿ ಹುಲಿ ಬಂತು ಹುಲಿ ಅನ್ನೋ ಗುಸುಗುಸು ಸುದ್ದಿ ಮಾತ್ರ ಓಡಾಡ್ತಾ ಇರೋದು ನಗೆಪಾಟಲಿಗೀಡು ಮಾಡಿದೆ.