ಕುಕ್ಕರ್ ಬಳಸಿ ಕಾಫಿ ತಯಾರಿಸುವುದನ್ನು ನೀವು ನೋಡಿದ್ದೀರಾ?! ಬೀದಿ ವ್ಯಾಪಾರಿಯೊಬ್ಬರು ಕುಕ್ಕರ್ ಬಳಸಿ ಬಿಸಿ ಬಿಸಿ ಕಾಫಿಯನ್ನು ತಯಾರಿಸುತ್ತಿರುವ ವಿಡಿಯೋ ವೈರಲ್ ಆಗಿದೆ.ನೀವು ಕಾಫಿ ಪ್ರಿಯರಾ? ಫಿಲ್ಟರ್ ಕಾಫಿ ಇಲ್ಲವೆಂದರೆ ನಿಮ್ಮ ದಿನ ಆರಂಭವಾಗುವುದೇ ಇಲ್ಲವಾ? ಮಧ್ಯರಾತ್ರಿ ಎಬ್ಬಿಸಿ ಕಾಫಿ ಕೊಟ್ಟರೂ ಕುಡಿಯುತ್ತೀರಾ? ಬೆಳಗ್ಗೆ ಎದ್ದ ಕೂಡಲೇ ನಿಮಗೆ ಬೆಡ್ ಕಾಫಿ ಬೇಕೇ ಬೇಕಾ? ಹಾಗಿದ್ದರೆ ಈ ವಿಚಿತ್ರವಾದ ಸುದ್ದಿಯನ್ನೊಮ್ಮೆ ಓದಿ ಬಿಡಿ. ಕಾಫಿಯನ್ನು ಇಷ್ಟಪಟ್ಟು ಕುಡಿಯುವವರೆಲ್ಲರಿಗೂ ಕಾಫಿ ಮಾಡಲು ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕಾಫಿ ಮಾಡುವುದು ಕೂಡ ಒಂದು ಕಲೆ. ಇಲ್ಲೊಬ್ಬರು ವ್ಯಕ್ತಿ ಕುಕ್ಕರ್ನಲ್ಲಿ ರುಚಿ ರುಚಿಯಾದ ಕಾಫಿ ಸಿದ್ಧಪಡಿಸಿಕೊಡುತ್ತಾರೆ. ಅನ್ನ ಮಾಡುವ ಕುಕ್ಕರ್ನಲ್ಲಿ ಕಾಫಿ ಮಾಡೋದು ಹೇಗೆ ಅಂತ ಆಶ್ಚರ್ಯವಾಗುತ್ತಿದ್ದರೆ ನೀವೂ ಈ ವಿಡಿಯೋವನ್ನೊಮ್ಮೆ ನೋಡಿ.
ಒಂದೊಂದು ಪ್ರದೇಶದ ಕಾಫಿಗೂ ವಿಭಿನ್ನವಾದ ರುಚಿ, ಪರಿಮಳ ಇರುತ್ತದೆ. ಕಾಫಿ ನಮ್ಮ ಇಂದ್ರಿಯಗಳನ್ನು ಜಾಗೃತಗೊಳಿಸುತ್ತದೆ. ಈಗೀಗ ಕಾಫಿಯಲ್ಲಿ ಹಲವು ಹೊಸ ಆಯ್ಕೆಗಳಿದ್ದರೂ ಫಿಲ್ಟರ್ ಕಾಫಿಗೆ ಬೇಡಿಕೆ ಇದ್ದೇ ಇದೆ. ಸಣ್ಣ ಸಣ್ಣ ಗೂಡಂಗಡಿಗಳಲ್ಲೂ ಫಿಲ್ಟರ್ ಕಾಫಿಯನ್ನು ಅತ್ಯಂತ ರುಚಿಯಾಗಿ ಮಾಡಿಕೊಡುತ್ತಾರೆ. ಆದರೆ, ಕುಕ್ಕರ್ ಬಳಸಿ ಕಾಫಿ ತಯಾರಿಸುವುದನ್ನು ನೀವು ನೋಡಿದ್ದೀರಾ?! ಬೀದಿ ವ್ಯಾಪಾರಿಯೊಬ್ಬರು ಕುಕ್ಕರ್ ಬಳಸಿ ಬಿಸಿ ಬಿಸಿ ಕಾಫಿಯನ್ನು ತಯಾರಿಸುತ್ತಿರುವ ವಿಡಿಯೋ ವೈರಲ್ ಆಗಿದೆ.ಇನ್ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿರುವ ಈ ವಿಡಿಯೋ ಭಾರೀ ವೈರಲ್ ಆಗಿದೆ. ಸೈಕಲ್ನಲ್ಲಿ ಕಾಫಿ ಮಾರುತ್ತಿದ್ದ ವ್ಯಕ್ತಿ ಕುಕ್ಕರ್ನಲ್ಲಿ ಕಾಫಿ ಮಾಡಿ ಕೊಡುತ್ತಿದ್ದಾರೆ. ಕಾಫಿ ಮಾಡುವ ಪಾತ್ರೆಯಲ್ಲಿ ಮೊದಲು ಹಾಲು ಮಿಕ್ಸ್ ಮಾಡುವ ಆತ ನಂತರ ಕಾಫಿ ಡಿಕಾಕ್ಷನ್, ಸಕ್ಕರೆಯನ್ನು ಹಾಕುತ್ತಾನೆ. ನಂತರ ಆ ಕುಕ್ಕರ್ನಿಂದ ಕಾಫಿ ಪಾತ್ರೆಯಲ್ಲಿ ನೊರೆ ಬರುವಂತೆ ಮಾಡಿ ಚೆನ್ನಾಗಿ ಮಿಕ್ಸ್ ಮಾಡುತ್ತಾನೆ. ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ಬಿಸಿಯಾದ, ನೊರೆಯುಕ್ತ ಕಾಫಿ ತಯಾರಾಗುತ್ತದೆ.
ಈ ವೀಡಿಯೊವನ್ನು ಅಪ್‌ಲೋಡ್ ಮಾಡಿದಾಗಿನಿಂದ 2.2 ಮಿಲಿಯನ್ ಜನರು ವೀಕ್ಷಿಸಿದ್ದಾರೆ. 28.7 ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಈ ಹೊಸ ಪ್ರಯೋಗ ಕಾಫಿ ತಯಾರಿಸುವ ಅನೇಕ ಜನರನ್ನು ವಿಸ್ಮಯಗೊಳಿಸಿದೆ. ಆತ ಮಾಡುವ ಕಾಫಿಗೆ ಸಾಕಷ್ಟು ಅಭಿಮಾನಿಗಳಿದ್ದು, ಸೈಕಲ್ನಲ್ಲಿ ಕಾಫಿ ಮಾಡುವ ವ್ಯಕ್ತಿಯ ಸರಳತೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.