ಬೆಂಗಳೂರು: ಕದ್ದ ಮೊಬೈಲ್‌ಗಳನ್ನು ಖದೀಮರಿಂದ ಪಡೆದುಕೊಂಡು ಹೊರ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ ಆರೋಪದಡಿ ಬಂಧಿಸಲು ಹೋದ ಪೊಲೀಸರ ಮೇಲೆ, ಹಲ್ಲೆ ನಡೆಸಲು ಮುಂದಾದ ರೌಡಿಶೀಟರ್ನನ್ನ ಪೊಲೀಸರು ಬಂಧಿಸಿದ್ದಾರೆ.
ಜಗಜೀವನ್ ರಾಮ್‌ನಗರ ಪೊಲೀಸ್ ಠಾಣೆಯ ರೌಡಿಶೀಟರ್ ಅಸ್ಲಾಂಪಾಶಾ (50) ಬಂಧಿತ ಆರೋಪಿ. ವೈದ್ಯಕೀಯ ಪರೀಕ್ಷೆ ಮುಗಿಸಿ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಅಸ್ಲಾಂಪಾಶಾ ಜೆಜೆನಗರ, ಎಸ್‌ಜೆ ಪಾರ್ಕ್, ವಿವೇಕನಗರ, ಗಿರಿನಗರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿ ಜಾಮೀನಿನ ಮೇರೆಗೆ ಹೊರ ಬಂದಿದ್ದ. ಕಳ್ಳತನ ಮಾಡಿದ ಮೊಬೈಲ್‌ಗಳನ್ನು ಆರೋಪಿಗಳಿಂದ ಪಡೆದು ವ್ಯವಸ್ಥಿತವಾಗಿ ಪ್ಯಾಕ್ ಮಾಡಿಕೊಂಡು ಮೊಬೈಲ್ಗಳನ್ನ ಬೇರೆ ಬೇರೆ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ.ಇತ್ತೀಚೆಗೆ ಮಾಗಡಿ ರೋಡ್ ಪೊಲೀಸರು ಮೊಬೈಲ್ ಖದೀಮನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದರು.
ಕದ್ದ ಮೊಬೈಲ್‌ಗಳನ್ನು ಅಸ್ಲಾಂಪಾಶಗೆ ನೀಡಿರುವುದಾಗಿ ಬಾಯ್ಬಿಟ್ಟಿದ್ದ. ಇದೇ ಮಾಹಿತಿ ಆಧರಿಸಿ ಪೊಲೀಸರು ಬಂಧಿಸಲು ಹೋದಾಗ ಅಸ್ಲಾಂಪಾಶ ಕುಟುಂಬಸ್ಥರು ಅಡ್ಡಿಪಡಿಸಿದ್ದಾರೆ.
ಕರ್ತವ್ಯನಿರತ ಪೊಲೀಸರ ಮೇಲೆಯೂ ಆರೋಪಿ ಹಲ್ಲೆಗೆ ಮುಂದಾಗಿದ್ದ. ಈ ಸಂಬಂಧ ಆತನನ್ನು ಪೊಲೀಸರು ಬಂಧಿಸಿದ್ದಾರೆ. 2019ರಲ್ಲಿ ಈತನನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿ 500ಕ್ಕಿಂತ ಹೆಚ್ಚು ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದರು.