ಅದು ದೇಶದಲ್ಲೇ ಅತ್ಯಂತ ಪ್ರಸಿದ್ಧವಾದ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ. ಇತ್ತೀಚಿಗೆ ಅಲ್ಲಿ ಹಿಂದೆಂದೂ ಕಂಡಿರದ ಕಾಡ್ಗಿಚ್ಚು ಉಂಟಾಗಿ ದೊಡ್ಡ ದುರಂತವೇ ನಡೆದು ಅಪಾರ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗಿತ್ತು. ಆದರೆ ಈಗ ತನ್ನ ಎಂದಿನ ಸೌಂದರ್ಯಕ್ಕೆ ಹಿಂದುರುಗಲು ಹವಣಿಸುತ್ತಿದೆ.
ಬಿರುಬೇಸಿಗೆಯಿಂದ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದ್ದ ಬಂಡಿಪುರ ಅರಣ್ಯ ಪ್ರದೇಶ ಈಗ ಮಳೆ ನಿಧಾನವಾಗಿ ಚೇತರಿಸಿಕೊಂಡು ಚಿಗುರೊಡೆಯುತ್ತಿದೆ.
ಇದೋ ದಡ್ಡ ಕಾನನ, ಕಾನನದ ನಡುವೆ ಸ್ವಚ್ಛಂದವಾಗಿ ವಿಹರಿಸುತ್ತಿರುವ ವನ್ಯಜೀವಿಗಳು, ಕಾಡಿನ ಮಧ್ಯ ಹಾದು ಹೋಗುವ ವಾಹನಗಳು, ಬೆಂದು ಬೂದಿಯ ದಿಬ್ಬದಂತಿದ್ದ ಪ್ರದೇಶ, ನಿಧಾನವಾಗಿ ಹಸಿರುಗೂಡುತ್ತಿರುವ ವನಸಂಪತ್ತು. ನಿರಾಳ ಭಾವದಿಂದ ವಿರಮಿಸುತ್ತಿರುವ ವನ್ಯ ಮೃಗಗಳು. ಪ್ರವಾಸಿಗರನ್ನು ಮತ್ತೆ ಕೈ ಬೀಸಿ ಕರೆಯುತ್ತಿರುವ ಉದ್ಯಾನವನ. ಅಂದಹಾಗೆ ಇಷ್ಟೆಲ್ಲಾ ದೃಶ್ಯವಳಿಗಳು ಕಂಡು ಬರುವುದು ಬೇರೆಲ್ಲೂ ಅಲ್ಲ ಗಡಿ ಜಿಲ್ಲೆ ಚಾಮರಾಜನಗರದಲ್ಲಿರುವ ಬಂಡಿಪುರದ ರಾಷ್ಟ್ರೀಯ ಉದ್ಯಾನವನದಲ್ಲಿ.
ಕಳೆದ ಎರಡು ತಿಂಗಳ ಹಿಂದೆ ಉಂಟಾದ ಭೀಕರ ಕಾಡ್ಗಿಚ್ಚಿಗೆ ಸಾವಿರಾರು ಹೆಕ್ಟೇರ್ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿಹೋಗಿತ್ತು. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಇತಿಹಾಸದಲ್ಲೇ ಕಂಡುಕೇಳರಿಯದ ರೀತಿಯಲ್ಲಿ ಬೆಂಕಿ ಅವಘಡ ಸಂಭವಿಸಿ ವನ್ಯಜೀವಿಗಳು ನಲುಗಿಹೋಗಿದ್ದವು.ಈ ಭೀತಿ ಕಳೆದ ಎರಡು ವಾರದಿಂದ ದೂರವಾಗಿದೆ. ಕಾರಣ ಭಯಂಕರ ಕಾಡ್ಗಿಚ್ಚಿನಿಂದ ನಲುಗಿಹೋಗಿದ್ದ ಕಾಡಿಗೆ ಮಳೆರಾಯನ ಸ್ಪರ್ಶವಾಗಿ ಈಗ ಮತ್ತೆ ಜೀವ ಕಳೆ ತುಂಬುತ್ತಿದೆ.