ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಪ್ರೊಟೆಸ್ಟ್ ಮೂರನೇ ದಿನಕ್ಕೆ ಕಾಲಿಟ್ಟಿದೆ. ಹಲವು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ ಹಾಗೂ CITU ರಾಜ್ಯಾದ್ಯಕ್ಷೆ ಎಸ್.ವರಲಕ್ಷ್ಮೀ ನೇತೃತ್ವದಲ್ಲಿ ನಡೆಯುತ್ತಿದೆ. ರಾಜ್ಯಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು ಕೆಲಸ ಸ್ಥಗಿತ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿರುವ ಅಂಗನವಾಡಿ ಕಾರ್ಯಕರ್ತೆಯರಿಂದ ಬೃಹತ್ ಪ್ರತಿಭಟನೆ ನಡೆಸಿದ್ದು, ಫ್ರೀಡಂ ಪಾರ್ಕ್ ಬಳಿ ಹಗಲು ರಾತ್ರಿ ರಸ್ತೆಯಲ್ಲೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಗುಜರಾತ್ ಸರ್ಕಾರದಂತೆ ನಮ್ಮ ರಾಜ್ಯದಲ್ಲೂ ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಜ್ಯುಟಿ ಯೋಜನೆ ಜಾರಿ ಮಾಡಬೇಕು. ಸರ್ಕಾರ 20 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಮಾತ್ರ LGK, UKG ಆರಂಭ ಮಾಡಲಾಗುತ್ತದೆ ಎಂದಿದೆ. ಆದ್ರೆ ರಾಜ್ಯದಲ್ಲಿ 65,950 ಅಂಗನವಾಡಿ ಕೇಂದ್ರಗಳಿದ್ದು, ಎಲ್ಲಾ ಕೇಂದ್ರಗಳಲ್ಲೂ ಶಾಲಾ ಪೂರ್ವ ಶಿಕ್ಷಣ ಜಾರಿ ಆಗಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಶಿಕ್ಷಣ ಜಾರಿಯಾದ್ರೆ, ಕಾರ್ಯಕರ್ತೆಯರಿಗೆ ಶಿಕ್ಷಕರ ಸ್ಥಾನಮಾನ ನೀಡಬೇಕು ಅಂಗನವಾಡಿ ಸಹಾಯಕಿ ಹಾಗೂ ಮಿನಿ ಕಾರ್ಯಕರ್ತೆಯರ ಮುಂಬಡ್ತಿ ಸಂಬಂಧ ತಿದ್ದುಪಡಿ ತರಬೇಕು. ಅಂಗನವಾಡಿ ಮಕ್ಕಳಿಗೆ ಪುಸ್ತಕ, ಉಚಿತ ಶೂ, ಸಮವಸ್ತ್ರ ನೀಡಬೇಕು. ಅಂಗನವಾಡಿ ಅಭಿವೃದ್ಧಿ ಮಾಡಿ, ಒಂದನೇ ತರಗತಿಗೆ ಸೇರುವ ಮಕ್ಕಳಿಗೆ ಅಂಗನವಾಡಿ ಕೇಂದ್ರದಿಂದ ಟಿಸಿ ತರಬೇಕು ಎಂಬ ನಿಯಮ ಮಾಡಬೇಕು. ಅಂಗನವಾಡಿ ಕೇಂದ್ರಕ್ಕೆ ಸರಬರಾಜು ಆಗುವ ಆಹಾರದಲ್ಲಿ ಭ್ರಷ್ಟಾಚಾರ ತಡೆಯಬೇಕು ಅಂತಾ ಕಾರ್ಯಕರ್ತೆಯರು ಆಗ್ರಹಿಸಿದ್ದಾರೆ.