ಶ್ರಾವಣ ಬಂತೆಂದರೆ ಎಲ್ಲೆಂದರಲ್ಲಿ ದೇವರು, ಪೂಜೆ, ಪುನಸ್ಕಾರಗಳು ಅದ್ಧೂರಿಯಿಂದ ನಡೆಯುತ್ತವೆ. ಮನೆ ಸ್ವಚ್ಛಗೊಳಿಸಿ ಹಲವು ದೇವರ ಆರಾಧನೆ, ಪೂಜಾ ಆಚರಣೆ ಮಾಡುವುದು ಸಾಮಾನ್ಯ. ಅದರಂತೆ ಹೈದ್ರಾಬಾದ್ ಕರ್ನಾಟಕ ಭಾಗದ ಪ್ರಸಿದ್ಧ ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ.
ಶ್ರಾವಣ ಸೋಮವಾರ ಅಂಗವಾಗಿ ಹೈದ್ರಾಬಾದ್ ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಕಲಬುರಗಿಯ ಶ್ರೀ ಶರಣ ಬಸವೇಶ್ವರ ದೇವಾಲಯಕ್ಕೆ ಭಕ್ತರ ದಂಡೇ ಹರಿದು ಬಂದಿತ್ತು. ಶರಣಬಸವೇಶ್ವರರಿಗೆ ತ್ರಿಕಾಲ, ತ್ರಿವಿಧ ಪೂಜೆ ನೆರವೇರಿಸುವ ಜತೆಗೆ ವಿಶೇಷ ಪೂಜೆಗಳು ಜರುಗಿದವು. ನಿತ್ಯದಂತೆ ದಾಸೋಹ ಮನೆಯಲ್ಲಿ ನಡೆದ ಇಷ್ಟಲಿಂಗ ಪೂಜೆ, ಅರ್ಚನ, ಅರ್ಪಣ, ಅನುಭಾವ, ತ್ರಿಕಾಲ ಪೂಜೆಗಳಲ್ಲಿ ಸಹಸ್ರಾರು ಜನರು ಪಾಲ್ಗೊಂಡು ಧನ್ಯತಾ ಭಾವ ಮೆರೆದರು.
ಬೆಳಗಿನ ಜಾವದಿಂದಲೇ ಶ್ರೀ ಶರಣ ಬಸವೇಶ್ವರನ ದರ್ಶನಕ್ಕೆ ಭಕ್ತರು ತಂಡೋಪತಂಡವಾಗಿ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.