ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸ್ಪೀಕರ್ ರಮೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಹೊಸ ಸ್ಪೀಕರ್ ಆಯ್ಕೆ ಕುರಿತು ಚರ್ಚೆ ನಡೆದಿದ್ದು, ಪೈಪೋಟಿ ಶುರುವಾಗಿದೆ.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದ ಬಿ.ಎಸ್.ಯಡಿಯೂರಪ್ಪ, ಸದನದಲ್ಲಿ ವಿಶ್ವಾಸಮತವನ್ನು ಸಾಬೀತುಪಡಿಸಿದ್ದಾರೆ. ಈ ಮೂಲಕ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸ್ಪೀಕರ್ ಆಯ್ಕೆ ಕುರಿತು ಚರ್ಚೆಗಳು ಶುರುವಾಗಿವೆ.
ಮಾಜಿ ಸಿಎಂ, ಶಾಸಕರಾದ ಜಗದೀಶ್ ಶೆಟ್ಟರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಸುರೇಶಕುಮಾರ್ ಹಾಗೂ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಹೆಸರುಗಳು ಸ್ಪೀಕರ್ ಹುದ್ದೆಗೆ ಪ್ರಮುಖವಾಗಿ ಕೇಳಿಬರಲಾರಂಭಿಸಿವೆ.
ಬಿ.ಎಸ್.ಯಡಿಯೂರಪ್ಪ ಪಕ್ಷದ ಹೈಕಮಾಂಡ್ ಭೇಟಿಯಾಗಿ ಚರ್ಚಿಸಿದ ಬಳಿಕವಷ್ಟೇ ನೂತನ ಸ್ಪೀಕರ್ ಹೆಸರು ಬಹಿರಂಗಗೊಳ್ಳಲಿದೆ.