ಖಾಸಗಿ ಬಸ್ ಚಾಲಕನೊಬ್ಬ ಉದ್ಧಟತನ ತೋರಿ ಪ್ರವಾಸಿಗರಿದ್ದ ಬಸ್ ನ್ನು ಸಮುದ್ರದ ನೀರಿನಲ್ಲಿ ಚಲಾಯಿಸಿ ಕೊನೆಗೆ ಸಂಕಷ್ಟಕ್ಕೆ ಈಡಾದ ಘಟನೆ ನಡೆದಿದೆ.
ಚಾಲಕನ ನಿರ್ಲಕ್ಷ್ಯದಿಂದಾಗಿ ಪ್ರವಾಸಿಗರನ್ನು ಕರೆದುಕೊಂಡು ಬಂದಿದ್ದ ಮಿನಿಬಸ್ಸೊಂದು ಸಮುದ್ರದ ನೀರಿನಲ್ಲಿ ಸಿಕ್ಕಿಹಾಕಿಕೊಂಡ ಘಟನೆ ಉತ್ತರ ಕನ್ನಡ ಜಿಕ್ಲೆಯ ಮುರ್ಡೇಶ್ವರದಲ್ಲಿ ನಡೆದಿದೆ.
`ಟೂರ್ ಬಾಸ್' ಹೆಸರಿನ ಮಿನಿಬಸ್‍ನಲ್ಲಿ ಉತ್ತರ ಕರ್ನಾಟಕದಿಂದ ಕೆಲವರು ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಚಾಲಕ ಉದ್ದಟತನ ತೋರಿ ಮಿನಿ ಬಸ್ ಅನ್ನು ಸಮುದ್ರಕ್ಕೆ ತೆಗೆದುಕೊಂಡು ಹೋಗಿದ್ದಾನೆ. ಸಮುದ್ರದಲ್ಲಿ ನೀರಿನ ಇಳಿತವಿದ್ದಿದ್ದರಿಂದ (ಲೋ ಟೈಡ್) ಚಾಲಕ ಏನು ಆಗುವುದಿಲ್ಲ ಎಂದು ಭಾವಿಸಿ ನೀರಿನಲ್ಲಿ ಇನ್ನಷ್ಟು ಮುಂದಕ್ಕೆ ಹೋಗಿದ್ದಾನೆ. ಆಗ ಬಸ್ ಉಸುಕಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಮಿನಿ ಬಸ್‍ನ ಚಕ್ರಗಳು ಉಸುಕಿನಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ ಎಷ್ಟೇ ಪ್ರಯತ್ನಿಸಿದರೂ ಬಸ್ ಅಲ್ಲಿಂದ ಕದಲಲಿಲ್ಲ.
ಇನ್ನೊಂದೆಡೆ ಸಮುದ್ರದಲ್ಲಿ ಉಬ್ಬರ (ಹೈ ಟೈಡ್) ಹೆಚ್ಚಾಗುತ್ತಿದ್ದರಿಂದ ಬಸ್ ಸಮುದ್ರ ಪಾಲಾಗುವ ಆತಂಕವಿತ್ತು. ಬಸ್‍ನಲ್ಲಿದ್ದ ಬಟ್ಟೆ-ಬರೆ, ಬ್ಯಾಗ್‍ಗಳನ್ನು ಹೊರಗೆ ತೆಗೆಯಲಾಯಿತು. ನೆರವಿಗೆ ಸ್ಥಳೀಯರು ಧಾವಿಸಿದರು. ಕೊನೆಗೆ ಟ್ರ್ಯಾಕ್ಟರ್ ತಂದು ಅದರ ಸಹಾಯದಿಂದ ಬಸ್ ಅನ್ನು ಸುರಕ್ಷಿತವಾಗಿ ದಡಕ್ಕೆ ಎಳೆದು ತರಲಾಯಿತು.