ಬೆಂಗಳೂರು: ಬಿಟ್ ಕಾಯಿನ್ ಹಗರಣ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದೆ. ರಾಷ್ಟ್ರಮಟ್ಟದಲ್ಲಿಯೂ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಬೆಳವಣಿಗೆ ಮಧ್ಯೆಯೇ ಹಗರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಆಲಿಯಾಸ್ ಶ್ರೀಕಿಗೆ ತನಿಖಾ ಅವಧಿಯಲ್ಲಿ ಡ್ರಗ್ಸ್ ನೀಡಿದ್ದರು ಎಂದು ಆರೋಪಿಸಿ ಶ್ರೀಕಿ ತಂದೆಯೇ ಕೋರ್ಟ್ ಮೆಟ್ಟಿಲೇರಿದ್ದ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಜಯನಗರ ನಿವಾಸಿ ಹ್ಯಾಕರ್ ಶ್ರೀಕೃಷ್ಣನ ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಕಳೆದ ವರ್ಷ ಬಂಧಿಸಿದ್ದರು. ವಿಚಾರಣೆ ವೇಳೆ ಬಿಟ್ ಕಾಯಿನ್ ದಂಧೆಯಲ್ಲಿ ಭಾಗಿಯಾಗಿ ಕೋಟ್ಯಂತರ ರೂಪಾಯಿ ಹಣ ಹ್ಯಾಕ್ ಮಾಡಿದ ಎಂಬುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು.
ಕಳೆದ ವರ್ಷ ಡಿ. 28ರಿಂದ ಜ.11ರವರೆಗೆ ಪೊಲೀಸ್ ಕಸ್ಟಡಿಯಲ್ಲಿರುವಾಗ ನನ್ನ ಮಗ ಶ್ರೀಕಿಗೆ ಮಾದಕವಸ್ತು ನೀಡಿ ಒತ್ತಾಯಪೂರ್ವಕವಾಗಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎಂದು ಆರೋಪಿಸಿ ಆರೋಪಿಯ ತಂದೆ ಗೋಪಾಲ್ ರಮೇಶ್ ನ್ಯಾಯಾಲಯ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಬಲವಂತವಾಗಿ ಡ್ರಗ್ಸ್ ನೀಡಿ ತಮಗೆ ಬೇಕಾದ ರೀತಿಯಲ್ಲಿ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ಕೋರ್ಟ್ ಕಟಕಟೆ ಮುಂದೆ ಪೊಲೀಸರು ಡ್ರಗ್ಸ್ ನೀಡಿದ್ದರು ಎಂದು ಶ್ರೀಕಿ ಹೇಳಿದ್ದ ಎನ್ನಲಾಗಿದೆ. ಈ ಸಂಬಂಧ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಗೋಪಾಲ್ ಮನವಿ ಮಾಡಿದ್ದಾರೆಂದು ಮಾಹಿತಿ ಲಭ್ಯವಾಗಿದೆ.