ತಿಹಾರ್ ಜೈಲಿನಲ್ಲಿರೋ ಡಿಕೆ ಶಿವಕುಮಾರ್ ಜೈಲು ಸೇರುವಂತಾಗಲು ಮೈತ್ರಿ ಪಕ್ಷಗಳ ನಾಯಕರೇ ಮುಹೂರ್ತ ಇಟ್ಟಿದ್ದರಾ ಅನ್ನೋ ಅನುಮಾನವನ್ನು ಸಚಿವರೊಬ್ಬರು ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ-ಕುಮಾರಸ್ವಾಮಿ –ದೇವೇಗೌಡರ ನಡುವೆ ಯಾರಿಗೂ ಯಾರಿಗೂ ಆಗೊಲ್ಲ, ಒಬ್ಬರ ಒಬ್ಬರ ಕಾಲು ಎಳೆಯೋದರಲ್ಲೇ ಮೈತ್ರಿ ಸರ್ಕಾರ ಪಥನವಾಯಿತು. ಡಿ.ಕೆ.ಶಿವಕುಮಾರ್ ಜೈಲು ಸೇರಲು ಮಾಡಿದ ದೊಡ್ಡ ಡ್ರಾಮಾ ಎಂದು ಆರೋಗ್ಯ ಸಚಿವ ಶ್ರೀರಾಮುಲು ಚಾಮರಾಜನಗರದಲ್ಲಿ ಗಂಭೀರ ಆರೋಪಿಸಿದರು.
ಆರೋಗ್ಯ ಸಚಿವರಾದ ಬಳಿಕ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ್ದಾರೆ ಸಚಿವ ಬಿ.ಶ್ರೀರಾಮುಲು.
ಈಗಾಗಲೇ ಶಾಸಕ ಸ್ಥಾನದಿಂದ ಅನರ್ಹರಾದವರು ಸುಪ್ರಿಂ ಕೋರ್ಟ್‍ನಲ್ಲಿ ದಾವೆ ಹೂಡಿ ವಿಚಾರಣೆ ಹಂತದಲ್ಲಿರುವಾಗ ಆ ಬಗ್ಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ನ್ಯಾಯಾಲಯದ ತೀರ್ಪು ಬಂದ ಬಳಿಕ ಚರ್ಚೆ ಮಾಡುವುದು ಸೂಕ್ತ ಎಂದ್ರು.
ರಾಜ್ಯದಲ್ಲಿ ಅ.21 ರಂದು ನಡೆಯಲಿರುವ 15 ವಿಧಾನ ಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ಇದರಿಂದ ರಾಜ್ಯದ ಬಿಜೆಪಿ ಸರ್ಕಾರ ಮೂರು ವರ್ಷಗಳ ಕಾಲ ಸುಭದ್ರವಾಗಿರುತ್ತದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದ್ರು.
ಅವಕಾಶಗಳು ಬಂದಾಗ ಶ್ರದ್ದೆಯಿಂದ ಕೆಲಸ ಮಾಡಬೇಕೆ ವಿನಃ ಭಾರಿ ನಿರೀಕ್ಷೆಗಳನ್ನು ಇಟ್ಟುಕೊಂಡು ಕೆಲಸ ಮಾಡಲು ಅಸಾಧ್ಯ. ದೇವರು ಕೊಟ್ಟಿದ್ದು ಪಂಚಾಮೃತ ಅಂತ ತಿಳಿದುಕೊಂಡು ಜನರ ಸೇವೆ ಮಾಡಬೇಕು ಎಂದರು.