ಖದೀಮ ಕಳ್ಳನೊಬ್ಬ ಪ್ರಸಿದ್ಧ ದೇವಸ್ಥಾನಕ್ಕೆ ನುಗ್ಗಿ ದೇವರಿಗೆ ನಮಿಸಿ ಹಣ ದೋಚಲು ಮುಂದಾಗಿದ್ದ ಘಟನೆ ನಡೆದಿದೆ.
ಯಾದಗಿರಿ ಜಿಲ್ಲೆಯ ಕಾಲಜ್ಞಾನಿ ಬಸವೇಶ್ವರ ದೇವಸ್ಥಾನ ಮೇಲೆ ಕಣ್ಣು ಹಾಕಿ ಹಣ ದೋಚಲು ಹೋದ ಹುಡುಗನೊಬ್ಬ ಈಗ ಜೈಲು ಪಾಲಾಗಿದ್ದಾನೆ. ದೇವರಿಗೆ ನಮಸ್ಕಾರ ಮಾಡಿ ಅದೇ ದೇಗುಲದಲ್ಲಿ ರಾತ್ರಿ ದರೋಡೆಗೆ ಯತ್ನಿಸಿದ್ದ ಕಳ್ಳ ಮಾಳಿಂಗರಾಯ ಜೈಲು ಸೇರಿದ್ದಾನೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದ ಕೊಡೇಕಲ್ ಬಸವೇಶ್ವರ ದೇಗುಲದಲ್ಲಿ ಘಟನೆ ನಡೆದಿದೆ. ಈ ದೇಗುಲ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಖ್ಯಾತಿ ಪಡೆದ ದೇಗುಲವಾಗಿದೆ. ಇಂತಹ ಧಾರ್ಮಿಕ ಕ್ಷೇತ್ರದಲ್ಲಿಯೇ ಕಳ್ಳತನಕ್ಕೆ ಕಣ್ಣು ಹಾಕಿದ್ದ ಮಾಳಿಂಗರಾಯ, ಹಣ ಕಳ್ಳತನ ಮಾಡಲು ಯತ್ನಿಸಿ ವಿಫಲನಾಗಿದ್ದಾನೆ.
ಮಾಳಿಂಗರಾಯ ರಾಜನಕೊಳ್ಳುರು ಗ್ರಾಮದ ನಿವಾಸಿಯಾಗಿದ್ದು, ಕಳೆದ ಸಲ ರಾತ್ರಿ ದೇಗುಲದ ಬೀಗ ಮುರಿದು ಹುಂಡಿ ದೋಚಲು ಯತ್ನಿಸಿದ್ದಾನೆ. ಕಳ್ಳತನ ಯತ್ನದ ವಿಡಿಯೋ ದೇಗುಲದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹುಂಡಿ ಒಡೆಯಲು ಸಾಧ್ಯವಾಗದಕ್ಕೆ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ತೆರಳಿದ್ದಾನೆ. ಸಿಸಿ ಕ್ಯಾಮೆರಾದ ವಿಡಿಯೋ ಆಧರಿಸಿ ಖದೀಮ ಕಳ್ಳ ಮಾಳಿಂಗರಾಯನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.