Publish Date: Sun, 16 Oct 2022 (16:14 IST)
Updated Date: Sun, 16 Oct 2022 (16:17 IST)
ಟೆಂಪೋ ಟ್ರಾವೆಲರ್, ಹಾಲಿನ ಲಾರಿ ಹಾಗೂ KSRTC ಬಸ್ ನಡುವೆ ಭೀಕರ ಅಪಘಾತವಾಗಿರುವ ಘಟನೆ ಹಾಸನದ ಅರಸೀಕೆರೆ ತಾಲ್ಲೂಕಿನ ಬಾಣವಾರದ ಗಾಂಧಿನಗರದಲ್ಲಿ ನಡೆದಿದೆ. ಫರಿಣಾಮ ಸ್ಥಳದಲ್ಲಿಯೇ 9 ಮಂದಿ ಸಾವನ್ನಪ್ಪಿದ್ದು, 12 ಜನರು ಗಾಯಗೊಂಡಿದ್ದಾರೆ. ಹಳ್ಳಿಕೆರೆ ಗ್ರಾಮದ 14 ಮಂದಿ ಟಿಟಿ ವಾಹನದಲ್ಲಿ ಧರ್ಮಸ್ಥಳಕ್ಕೆ ತೆರಳಿ, ಅಲ್ಲಿಂದ ಹಾಸನಕ್ಕೆ ಆಗಮಿಸಿ ಹಾಸನಾಂಬೆ ದೇವಿ ದರ್ಶನ ಪಡೆದು ಗ್ರಾಮಕ್ಕೆ ತೆರಳುತ್ತಿದ್ದರು. ಟಿಟಿ ವಾಹನದ ಹಿಂದೆ ಸಾರಿಗೆ ಬಸ್ ಬರುತ್ತಿತ್ತು. ಶಿವಮೊಗ್ಗ ಕಡೆಯಿಂದ ಅರಸೀಕೆರೆ ಕಡೆಗೆ ಬರುತ್ತಿದ್ದ ಯಮಸ್ವರೂಪಿ ಹಾಲಿನ ಲಾರಿ ಚಾಲಕನಿಗೆ ತಿರುವು ಗೊತ್ತಾಗದೆ ಎರಡು ವಾಹನಗಳು ಬರುತ್ತಿದ್ದ ಕಡೆಗೆ ಏಕಮುಖವಾಗಿ ಸಂಚಾರ ನಡೆಸಿದ್ದಾನೆ. ಈ ವೇಳೆ ವೇಗವಾಗಿದ್ದ ಟಿಟಿ ವಾಹನ ಹಾಲಿನ ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಇದೇ ವಾಹನದ ಹಿಂಬದಿಯಿದ್ದ ಸಾರಿಗೆ ಬಸ್ ಪಲ್ಟಿಯಾಗಿದ್ದ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಮೂರು ವಾಹನಗಳ ನಡುವೆ ಸರಣಿ ಅಪಘಾತ ನಡೆದಿದೆ. ಈ ಸರಣಿ ಅಪಘಾತದಲ್ಲಿ 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 12 ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. 10 ಮಂದಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಬ್ಬರು ಅರಸೀಕೆರೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ರಭಸಕ್ಕೆ ಟಿಟಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.