Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕೆಆರ್ ಎಸ್ ಜಲಾಶಯದ ಬಳಿಯ ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.
ಶನಿವಾರ ಬೆಳಿಗ್ಗೆ ಬೆಂಗಳೂರಿನ ರಾಜ್ಯಪಾಲರ ಭವನದಲ್ಲಿ ನೂತನ ರಾಜ್ಯಪಾಲ ಥಾಮರ್ ಸಿಂಗ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ ಸುಮಲತಾ ಬೇಬಿ ಬೆಟ್ಟದಲ್ಲಿನ ಅಕ್ರಮ ಗಣಿಗಾರಿಕೆಯಿಂದ ಸ್ಥಳೀಯರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದು, ಅದರ ಪರಿಣಾಮಗಳ ಬಗ್ಗೆ ವಿವರಿಸಿದ್ದೇನೆ. ರಾಜ್ಯಪಾಲರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಸರ್ಕಾರದ ಗಮನಕ್ಕೆ ತರುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದರು ಹೇಳಿದರು.
ಇದೇ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ನಡುವೆ ಆಸ್ತಿಗಾಗಿ ಜಟಾಪಟಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸುಮಲತಾ, ಪ್ರಕರಣದ ಬಗ್ಗೆ ನಾನು ಮಾತಾಡೋಕೆ ಇಷ್ಟ ಪಡಲ್ಲ. ನಾನು ಅನಾವಶ್ಯಕ ಹೇಳಿಕೆ ಕೊಡೋದು ಸರಿಯಲ್ಲ ಎಂದರು.
ಹೊಟೇಲ್ ನಲ್ಲಿ ನಡೆದ ಹಲ್ಲೆ ಬಗ್ಗೆ ತನಿಖೆ ನಡೀತಿದೆ. ಸತ್ಯಾಂಶ ಹೊರಗೆ ಬರಲಿ. ಹಲ್ಲೆ ಪ್ರಕರಣ ಬಗ್ಗೆ ನನಗೆ ಗೊತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.