ಸಂಸದೆ ಸುಮಲತಾ ಅವರಿಗೆ ಬಿರುಕಿಗೂ ಮತ್ತು ದುರಸ್ತಿಗೂ ವ್ಯತ್ಯಾಸ ಗೊತ್ತಿಲ್ಲ. ಹೀಗಾಗಿ ಕೆಆರ್ ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂದು ಹೇಳಿ ಪದ ಪ್ರಯೋಗ ಗೊತ್ತಿಲ್ಲದೇ ಏನೋ ಹೇಳಿದ್ದಾರೆ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಆರ್ ಎಸ್ ಉಳಿವಿನ ಬಗ್ಗೆ ಎಲ್ಲರಿಗೂ ಕಾಳಜಿ ಇದೆ. ಕೆಆರ್ ಎಸ್ ಬಿರುಕು ಬಿಟ್ಟಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ವಿಚಾರದಲ್ಲಿ ಗೊಂದಲ ಸೃಷ್ಟಿ ಸರಿಯಲ್ಲ ಎಂದರು.
ಮಂಡ್ಯ ಜಗಳ ಯಾರಿಗೂ ಶೋಭೆ ತರುವಂತದ್ದಲ್ಲ. ಸುಮಲತಾ ಹಾಗೂ ಜೆಡಿಎಸ್ ಮುಖಂಡರು ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಈ ಕಿತ್ತಾಟ ಇಬ್ಬರಿಗೂ ನಷ್ಟವನ್ನುಂಟು ಮಾಡುತ್ತೆ. ಮಾತಿನ ಸಮರ ಯಾರಿಗೂ ಲಾಭವನ್ನುಂಟು ಮಾಡುವುದಿಲ್ಲ. ಈ ಮಾತಿನ ಸಮರವನ್ನ ಅಂತ್ಯ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಕೆಆರ್ ಎಸ್ ವಿಷಯದಲ್ಲಿ ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು. ಕೆಆರ್ ಎಸ್ ಗೆ ತೊಂದರೆಯಾದರೆ ಗಣಿಗಾರಿಕೆಯನ್ನ ಸಂಪೂರ್ಣವಾಗಿ ನಿಲ್ಲಿಸಬೇಕು. ತೊಂದರೆ ಇಲ್ಲವಾದರೆ ಗಣಿಗಾರಿಕೆಗೆ ಸಮ್ಮತಿ ಸೂಚಿಸಬೇಕು. ಕೆ ಆರ್ ಎಸ್ ವಿಚಾರದಲ್ಲಿ ಸಮಗ್ರ ವರದಿಗಾಗಿ ತಜ್ಞರ ಸಮಿತಿ ರಚಿಸಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದರು.