ತನ್ನ ಮದುವೆ ಎಂಬುದನ್ನು ಲೆಕ್ಕಿಸದೇ ಮದುವೆ ದಿನವೇ ಪರೀಕ್ಷೆ ಬರೆದು ಮದುವೆಗಿಂತ ಶಿಕ್ಷಣ ಮೊದಲು ಎಂಬುದನ್ನು ಮಧುಮಗಳೊಬ್ಬಳು ಸಮಾಜಕ್ಕೆ ತೋರಿಸಿಕೊಟ್ಟಿದ್ದಾಳೆ.
ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಜಾಗೀನಕೆರೆ ಗ್ರಾಮದ ಕೃಷ್ಣೇಗೌಡ ಪುತ್ರಿ ಕಾವ್ಯ ತನ್ನ ಮದುವೆ ದಿನವೇ ಎಕ್ಸಾಂ ಬರೆದ ಹುಡುಗಿ. ಲೋಹಿತ್ ಎಂಬುವರ ಜೊತೆ ಕಾವ್ಯಾಳ ಮದುವೆಗೆ ಇಂದು ಮೂಹುರ್ತ ನಿಗಧಿಯಾಗಿತ್ತು.
ಆದ್ರೆ ಕಾವ್ಯಾ ಕೆ ಆರ್ ಪೇಟೆ ಕಲ್ಪತರು ಕಾಲೇಜಿನಲ್ಲಿ ಬಿ-ಕಾಂ ವ್ಯಾಸಂಗ ಮಾಡ್ತಿದ್ದರಿಂದ ಮಧುಮಗಳಿಗೆ ಇಂದೆ ಬ್ಯುಸಿನೆಸ್ ಟ್ಯಾಕ್ಸ್ ಎಕ್ಸಾಂ ಕೂಡ ಎದುರಾಗಿದೆ. ಕಾವ್ಯ ತನ್ನ ಮದುವೆ ದಿನದಂದು ಪರೀಕ್ಷೆಯನ್ನು ನಿರ್ಲಕ್ಷಿಸದೇ ಎಕ್ಸಾಂ ಬರೆದು ಹೆಣ್ಣು ಮಕ್ಕಳಿಗೆ ಶಿಕ್ಷಣದ ಪ್ರಾಮುಖ್ಯತೆ ಬಗ್ಗೆ ಇರುವ ಕಾಳಜಿಯನ್ನು ತಿಳಿಸಿಕೊಟ್ಟಿದ್ದಾಳೆ.
ಇಂದು ಬೆಳಿಗ್ಗೆ 11 ಗಂಟೆಗೆ ಕಾವ್ಯಾಳ ಮದುವೆ ಮೂಹೂರ್ತ ಫಿಕ್ಸ್ ಆಗಿತ್ತು. ಕಾವ್ಯಾ ಎಲ್ಲಾ ಮದುವೆ ಶಾಸ್ತ್ರಗಳನ್ನು ಮುಗಿಸಿಕೊಂಡು ಮಧುಮಗಳ ಸೀರೆಯಲ್ಲೆ ಪರೀಕ್ಷೆ ಬರೆಯಲು ಬಂದಿದ್ದಾಳೆ. ಮಗಳ ಈ ಯೋಚನೆಗೆ ತಂದೆ ಕೃಷ್ಣೇಗೌಡ ಕೂಡ ಸಾಥ್ ನೀಡಿ ಕಾವ್ಯಾ ಪರೀಕ್ಷೆ ಬರೆದು ಬರೋವರ್ಗೂ ಪರೀಕ್ಷಾ ಕೇಂದ್ರದ ಹೊರಗೆ ಕಾದುನಿಂತು ಮಗಳು 10:45 ಕ್ಕೆ ಎಕ್ಸಾಂ ಮುಗಿಸಿ ಬಂದ ಮೇಲೆ ಸೀದಾ ಕಲ್ಯಾಣಮಂಟಪಕ್ಕೆ ಕರೆತಂದು ಮಗಳ ಮದುವೇ ಮಾಡಿಸಿದ್ದಾರೆ.