ಅಶ್ಲೀಲ ವಿಡಿಯೋ ಸೋರಿಕೆಯಾಗಿರುವ ಆರೋಪ ಕೇಳಿಬಂದ ಬೆನ್ನಲ್ಲೇ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮೊಹಾಲಿಯಲ್ಲಿರುವ ಖಾಸಗಿ ವಿವಿ ಕ್ಯಾಂಪಸ್ಗೆ ಶನಿವಾರ (ಸೆ.17) ರಾತ್ರಿ ಜಮಾಯಿಸಿ, ಘಟನೆಯ ವಿರುದ್ಧ ಪ್ರತಿಭಟನೆಯನ್ನು ನಡೆಸಿದರು. ವಿದ್ಯಾರ್ಥಿನಿಯರು ಹಾಸ್ಟೆಲ್ನಲ್ಲಿ ಸ್ನಾನ ಮಾಡುವಾಗ ಆರೋಪಿ ವಿದ್ಯಾರ್ಥಿನಿ ರಹಸ್ಯವಾಗಿ ಚಿತ್ರೀಕರಣ ಮಾಡಿದ್ದಾಳೆ ಎಂದು ಆರೋಪಿಸಿ, ಆಕ್ರೋಶ ಹೊರಹಾಕಿದರು. ಈ ಸಂದರ್ಭದಲ್ಲಿ ಓರ್ವ ವಿದ್ಯಾರ್ಥಿನಿ ಕುಸಿದುಬೀಳಲು, ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರತಿಭಟನೆಯ ಕಾವು ಜೋರಾಗುತ್ತಿದ್ದಂತೆ ಎಫ್ಐಆರ್ ದಾಖಲಿಸಿದ ಪೊಲೀಸರು ಆರೋಪಿ ವಿದ್ಯಾರ್ಥಿನಿಯನ್ನು ಬಂಧಿಸಿದರು. ಇದಾದ ಬೆನ್ನಲ್ಲೇ ಉಳಿದ ಇನ್ನಿಬ್ಬರು ಆರೋಪಿಗಳನ್ನು ಸಹ ಬಂಧಿಸಲಾಗಿದ್ದು, ಮೂವರು ಆರೋಪಿಗಳ ಫೋನ್‌ಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದು, ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿದ್ಯಾರ್ಥಿನಿಯು ಹಾಸ್ಟೆಲ್ನಲ್ಲಿ ತನ್ನೊಂದಿಗೆ ಇದ್ದ ಸಹಪಾಠಿಗಳ ಎಂಎಂಎಸ್ ಕ್ಲಿಪ್‌ಗಳನ್ನು ರಹಸ್ಯವಾಗಿ ಚಿತ್ರೀಕರಿಸಿದ್ದು, ಅವುಗಳನ್ನು ಹಿಮಾಚಲ ಪ್ರದೇಶದ ಶಿಮ್ಲಾದ ಬಾಯ್ಫ್ರೆಂಡ್ಗೆ ಕಳುಹಿಸುತ್ತಿದ್ದಳು ಎಂದು ತಿಳಿದುಬಂದಿದೆ. ಆರೋಪಿ ಕಳುಹಿಸುತ್ತಿದ್ದ ಎಂಎಂಎಸ್ ಕ್ಲಿಪ್‌ಗಳನ್ನು ಪಡೆದ ವ್ಯಕ್ತಿ ಅಂತರ್ಜಾಲದಲ್ಲಿ ಅಪ್‌ಲೋಡ್ ಮಾಡಿರುವುದಾಗಿ ತಿಳಿದುಬಂದಿದೆ. ಅವುಗಳನ್ನು ನೋಡಿ ವಿದ್ಯಾರ್ಥಿನಿಯರು ಶಾಕ್ ಆಗಿದ್ದು, ಪ್ರತಿಭಟನೆಯನ್ನು ನಡೆಸಿದ್ದಾರೆ.
ಹಾಸ್ಟೆಲ್ ವಿದ್ಯಾರ್ಥಿನಿಯರ 50 ರಿಂದ 60 ವೀಡಿಯೋಗಳಿವೆ. ಆಕೆ ಅದನ್ನು ತನ್ನ ಸ್ನೇಹಿತರಿಗೆ ಕಳುಹಿಸಿದ್ದಾಳೆ. ನಾವು ಘಟನೆಯ ಬಗ್ಗೆ ಪ್ರಶ್ನಿಸಿದಾಗ, ವಿಡಿಯೋ ಮಾಡಿರುವುದಾಗಿ ಒಪ್ಪಿಕೊಂಡಳು ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಿದಳು ಎಂದು ವಿದ್ಯಾರ್ಥಿನಿಯೊಬ್ಬಳು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾಳೆ.
ರಹಸ್ಯವಾಗಿ ವಿಡಿಯೋ ಚಿತ್ರೀಕರಣ ನಡೆದಿರುವುದು ಸತ್ಯ. ವಿವಿಗೆ ಕೆಟ್ಟ ಹೆಸರು ಬರುತ್ತದೆ ಅಂತಾ ಕಾಲೇಜು ಆಡಳಿತವು ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ಹಾಸ್ಟೆಲ್ ವಿದ್ಯಾರ್ಥಿನಿಯರು ಮಾಧ್ಯಮದ ಮುಂದೆ ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಎಂಎಂಎಸ್ ಕ್ಲಿಪ್‌ಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂಬ ವರದಿಗಳನ್ನು ಪೊಲೀಸರು ತಿರಸ್ಕರಿಸಿ, ಆರೋಪಿಯ ಒಂದು ವೀಡಿಯೊ ಮಾತ್ರ ಇದೆ ಎಂದು ಸಮರ್ಥಿಸಿಕೊಂಡರು. ಇಲ್ಲಿಯವರೆಗೆ, ಯಾವುದೇ ಹುಡುಗಿಯ ಅಂತಹ ವಿಡಿಯೋ ನಮ್ಮ ಗಮನಕ್ಕೆ ಬಂದಿಲ್ಲ. ಇದು ಹೆಚ್ಚು ವದಂತಿಯಂತೆ ತೋರುತ್ತದೆ ಎಂದು ಮೊಹಾಲಿ ಎಸ್‌ಎಸ್‌ಪಿ ವಿವೇಕ್ ಸೋನಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನಿರ್ದೇಶನದ ಮೇರೆಗೆ, ಪ್ರಕರಣದ ತನಿಖೆಗಾಗಿ ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ. ಸೋಮವಾರ (ಸೆ.19) ಪೊಲೀಸರು ಮೂವರು ಆರೋಪಿಗಳನ್ನು ಮೊಹಾಲಿಯ ಖರಾರ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹತ್ತು ದಿನಗಳ ಕಸ್ಟಡಿಗೆ ಕೋರಿದ್ದಾರೆ. ಆದರೆ, ನ್ಯಾಯಾಲಯ ಆರೋಪಿಯನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.
ಇದೇ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯವು ಸೆಪ್ಟೆಂಬರ್ 24 ರವರೆಗೆ ರಜೆಯನ್ನು ಘೋಷಿಸಿದ್ದು, ಹಲವಾರು ವಿದ್ಯಾರ್ಥಿಗಳು ತಮ್ಮ ಮನೆಗಳಿಗೆ ಮರಳಿದ್ದಾರೆ.