ಬಡವರಿಗೆ ಹಾಗೂ ಹಿಂದುಳಿದವರಿಗೆ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯ ಒದಗಿಸುವ ಉದ್ದೇಶದಿಂದ ಬಿಬಿಎಂಪಿ ವತಿಯಿಂದ ಹಿಂದೆ ಅನುಷ್ಠಾನ ಮಾಡಿದ್ದ ಒಂಟಿ ಮನೆ ಯೋಜನೆಯನ್ನು ಪುನರ್ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಈ ಕುರಿತ ಆದೇಶ ಶೀಘ್ರವಾಗಿ ಹೊರಬೀಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನ ಚಿಕ್ಕಪೇಟೆ ವಿಧಾನ ಸಭಾ ಕ್ಷೇತ್ರದ-100 ಯೋಜನೆ ಕಾಮಗಾರಿಯ ವೀಕ್ಷಣೆ, ನವೀಕರಣಗೊಂಡಿರುವ ಬೈರಸಂದ್ರ ಕೆರೆ ಹಾಗೂ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಎಂ.ಎಸ್. ಬಹುಮಹಡಿ ವಸತಿ ಕಟ್ಟಡದ ಉದ್ಘಾಟನೆ ಹಾಗೂ ಗಾಂಧಿ ಬಜಾರಿನಲ್ಲಿ ಬಹುಮಹಡಿ ವಾಹನ ನಿಲದಾಣ ಕಟ್ಟಡ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಕೋವಿಡ್ ಸಾಂಕ್ರಾಮಿಕದಿಂದಾಗಿ ನಿಂತು ಹೋಗಿದ್ದ ಯೋಜನೆಯನ್ನು ಪ್ರಾರಂಭಿಸುವುದರಿಂದ ಸ್ಥಳವಿದ್ದವರು ಒಂಟಿ ಮನೆ ನಿರ್ಮಾಣ ಮಾಡಿಕೊಳ್ಳಲು ಸಹಾಯವಾಗಲಿದೆ. ಪ್ರತಿ ವಾರ್ಡಿಗೆ ಮನೆಗಳ ಸಂಖ್ಯೆಯನ್ನು ನಿಗದಿ ಮಾಡಲಾಗುವುದು ಎಂದರು. ಬೆಂಗಳೂರಿನ ಮೂಲಭೂತ ಸೌಕರ್ಯ ಹಾಗೂ ನಾಗರಿಕರಿಗೆ ಕಾನೂನಿನ ತೊಡಕುಗಳನ್ನು ಸರಿಪಡಿಸಿ ಬೆಂಗಳೂರಿನ ಅಂತರರಾಷ್ಟ್ರೀಯ ಮಟ್ಟದ ಖ್ಯಾತಿಗೆ ಗರಿ ಮೂಡಿಸಲು ಇನ್ನಷ್ಟು ಕಾರ್ಯಕ್ರಮಗಳನ್ನು ಜೋಡಿಸಲಾಗುತ್ತಿದೆ. ನಗರಕ್ಕೆ ತನ್ನದೇ ಆರೋಗ್ಯ ವ್ಯವಸ್ಥೆಯನ್ನು ರೂಪಿಸಲಾಗಿದೆ. ಏಕಸಾಮ್ಯ ಆಡಳಿತ ತರುವ ಕೆಲಸ, 20 ಶಾಲೆಗಳನ್ನು ಆಧುನಿಕರಣ ಮಾಡಲಾಗುತ್ತಿದೆ. ಶಿಕ್ಷಣ, ಆರೋಗ್ಯ ಹಾಗೂ ಮೂಲಭೂತ ಸೌಕರ್ಯ, ಸೌಂದರ್ಯೀಕರಣವನ್ನು ಬೆಂಗಳೂರಿನ ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೂಪಿಸಲಾಗಿದೆ ಎಂದು ಉಖ್ಯಮಂತ್ರಿಗಳು ತಿಳಿಸಿದರು.