Publish Date: Thu, 26 Mar 2020 (17:35 IST)
Updated Date: Thu, 26 Mar 2020 (17:39 IST)
ಕೋವಿಡ್ 19 ವೈರಸ್ ಮುನ್ನೆಚ್ಚರಿಕೆಯ ಕ್ರಮವಾಗಿ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ.
ಉತ್ತರಕನ್ನಡ ಜಿಲ್ಲಾಡಳಿತವು ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಅನಾವಶ್ಯಕವಾಗಿ ಯಾವುದೇ ಕಾರಣಗಳಿಲ್ಲದೇ ಓಡಾಡುವವರ ಡ್ರೈವಿಂಗ್ ಲೈಸೆನ್ಸ್ ಹಾಗೂ ವಾಹನದ ನೊಂದಣಿಯನ್ನು ರದ್ದು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಕೆ. ಎಚ್ಚರಿಕೆ ನೀಡಿದ್ದರು. ಆದರೆ ಕೆಲವು ಸಾರ್ವಜನಿಕರು ಇದಕ್ಕೂ ಬಗ್ಗದ ಹಿನ್ನೆಲೆಯಲ್ಲಿ ಇನ್ನಷ್ಟು ಬಿಗಿ ಕ್ರಮಕ್ಕೆ ಅವರು ಮುಂದಾಗಿದ್ದಾರೆ.
ಯಾವುದೇ ಕಾರಣಗಳಿಲ್ಲದೇ ಅನಗತ್ಯವಾಗಿ ರಸ್ತೆಯಲ್ಲಿ ಓಡಾಡಿ ಕಾಯ್ದೆ ಉಲ್ಲಂಘಿಸುವ ವ್ಯಕ್ತಿ ಕೈಗೆ ಮುದ್ರೆ ಹಾಕಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ. ಮುದ್ರೆ ಹಾಕಿಸಿಕೊಂಡ ವ್ಯಕ್ತಿ ಎರಡನೇ ಬಾರಿ ಮತ್ತೆ ಆದೇಶ ಉಲ್ಲಂಘಿಸಿದರೆ ಆತ ವಾಸಿಸುವ ವಸತಿ ಪ್ರದೇಶದಲ್ಲಿ ಆತನ ಹೆಸರನ್ನು ಸಾರ್ವಜನಿಕ ಪ್ರಕಟಣೆಯ ಮೂಲಕ ಘೋಷಿಸಲಾಗುತ್ತದೆ.
ಮೂರನೇ ಬಾರಿಯೂ ಆದೇಶ ಉಲ್ಲಂಘಿಸಿದರೆ ಜಿಲ್ಲಾಡಳಿತದ ವೆಬ್‌ಸೈಟ್‌ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಉಲ್ಲಂಘನೆ ಮಾಡಿದವರು ಎಂದು ಆತನ ಫೋಟೊ ಹಾಕಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.