ರಸ್ತೆ ರಂಪಾಟ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಕಳೆದ ಎಂಟು ತಿಂಗಳಿಂದ ಜೈಲಿನಲ್ಲಿದ್ದಾರೆ. ಅವರನ್ನು ಸನ್ನಡತೆ ಆಧಾರದ ಮೇಲೆ ಅವಧಿ ಪೂರ್ವ ಬಿಡುಗಡೆಗೊಳಿಸುವ ಸಾಧ್ಯತೆ ಇದೆ. ಗಣರಾಜ್ಯೋತ್ಸವ ದಿನ ಒಟ್ಟು 51 ಕೈದಿಗಳನ್ನು ಬಿಡುಗಡೆಗೊಳಿಸಲು ಪಂಜಾಬ್‌ನ ಆಪ್ ಸರ್ಕಾರ ತೀರ್ಮಾನಿಸಿದೆ. ಇದರಲ್ಲಿ ಸಿಧು ಅವರ ಹೆಸರು ಕೂಡ ಇದೆ. ಈ ನಿರ್ಧಾರ ಕುರಿತು ಶೀಘ್ರವೇ ಸಂಪುಟ ಸಭೆಯಲ್ಲಿ ಚರ್ಚಿಸಿ ಅನುಮತಿ ಪಡೆಯಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಸಂಪುಟ ಸಭೆಯ ಅನುಮತಿ ದೊರೆತ ನಂತರ ಬಿಡುಗಡೆಯಾಗಲಿರುವ ಕೈದಿಗಳ ಪಟ್ಟಿಯನ್ನು ರಾಜ್ಯಪಾಲರ ಸಮ್ಮತಿಗೆ ಕಳಿಸಿಕೊಡಲಾಗುತ್ತದೆ. 1988ರಲ್ಲಿ ನಡೆದ ರಸ್ತೆ ಹೊಡೆದಾಟ ಪ್ರಕರಣದಲ್ಲಿ ಸಿಧು ಶಿಕ್ಷೆಗೆ ಗುರಿಯಾಗಿದ್ದರು. ಸುಪ್ರೀಂ ಕೋರ್ಟ್ ಅವರಿಗೆ ಒಂದು ವರ್ಷದ ಕಾರಾಗೃಹ ಶಿಕ್ಷೆ ವಿಧಿಸಿದೆ. ಕಳೆದ ಮೇ ತಿಂಗಳ 20ರಂದು ಅವರು ಪಟಿಯಾಲ ಜೈಲು ಸೇರಿದ್ದರು.