Publish Date: Thu, 28 May 2026 (15:48 IST)
Updated Date: Thu, 28 May 2026 (15:50 IST)
ಬೆಂಗಳೂರು: ರಾಜಭವನಕ್ಕೆ (ಲೋಕಭವನ) ತೆರಳಿ ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ತಮ್ಮ ಅಧಿಕೃತ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ, ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದೀರ್ಘ ಪತ್ರಿಕಾಗೋಷ್ಠಿ ನಡೆಸಿ ಅತ್ಯಂತ ಭಾವುಕವಾಗಿ ಮಾತನಾಡಿದರು.
ಐದು ದಶಕಗಳ ತಮ್ಮ ರಾಜಕೀಯ ಜೀವನದ ಹಾದಿ ಹಾಗೂ ಹೈಕಮಾಂಡ್ ನಿರ್ಧಾರಕ್ಕೆ ತಲೆಬಾಗಿ ತಾವು ನೀಡಿದ ರಾಜೀನಾಮೆಯ ಹಿಂದಿನ ಆಶಯಗಳನ್ನು ಬಿಚ್ಚಿಟ್ಟರು. ಸಿದ್ದರಾಮಯ್ಯ ಅವರ ರಾಜೀನಾಮೆ ಭಾಷಣದ ಪ್ರಮುಖ ಹೈಲೈಟ್ಸ್ ಇಲ್ಲಿದೆ:
ಡಾ. ರಾಜ್‌ಕುಮಾರ್ ಅವರ ಸಾಲುಗಳನ್ನು ಸ್ಮರಿಸಿದ 'ಸಿದ್ದು'
ಭಾಷಣದ ಆರಂಭದಲ್ಲೇ ಕನ್ನಡದ ವರನಟ ಡಾ. ರಾಜ್‌ಕುಮಾರ್ ಅವರ ಪ್ರಸಿದ್ಧ ಶೈಲಿಯನ್ನು ಸ್ಮರಿಸಿದ ಸಿದ್ದರಾಮಯ್ಯ, "ನಾನೊಬ್ಬ ರಾಜಕಾರಣಿ. ಆದರೆ ನನಗೆ ಈ ದೇಶದ ಸಂವಿಧಾನವೇ ಧರ್ಮ ಮತ್ತು ರಾಜ್ಯದ ಮತದಾರರೇ ನನ್ನ ಪಾಲಿನ 'ಅಭಿಮಾನಿ ದೇವರುಗಳು'. ಏಳು ಕೋಟಿ ಕನ್ನಡಿಗರಿಗೆ ಎರಡು ಬಾರಿ ಮುಖ್ಯಮಂತ್ರಿಯಾಗಿ ಹಾಗೂ ಎರಡು ಬಾರಿ ವಿರೋಧ ಪಕ್ಷದ ನಾಯಕನಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ" ಎಂದರು.
ನಾನು ಆಕಸ್ಮಿಕ ರಾಜಕಾರಣಿ
ತಮ್ಮ ರಾಜಕೀಯದ ಆರಂಭದ ದಿನಗಳನ್ನು ನೆನೆದ ಅವರು, "ನಮ್ಮ ಕುಟುಂಬದಲ್ಲಿ ಯಾರೂ ರಾಜಕೀಯದಲ್ಲಿದ್ದವರಲ್ಲ. ನಾನು ಒಬ್ಬ ಆಕಸ್ಮಿಕ ರಾಜಕಾರಣಿ. ಹಳ್ಳಿಯಿಂದ ಬಂದು ಈ ಮಟ್ಟಕ್ಕೆ ಬೆಳೆಯುತ್ತೇನೆ ಎಂದು ಅಂದುಕೊಂಡಿರಲಿಲ್ಲ. ನನಗೆ ಇಂತಹ ದೊಡ್ಡ ಜವಾಬ್ದಾರಿಗಳನ್ನು ನೀಡಿದ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಾನು ಸದಾ ಕೃತಜ್ಞನಾಗಿರುತ್ತೇನೆ. ಹೈಕಮಾಂಡ್ ಏನು ಸೂಚಿಸಿದೆಯೋ, ಅದನ್ನು ನಾನು ಪ್ರಾಮಾಣಿಕವಾಗಿ ಪಾಲಿಸಿದ್ದೇನೆ" ಎಂದು ಸ್ಪಷ್ಟಪಡಿಸಿದರು.
ಬುದ್ಧ, ಬಸವ, ಅಂಬೇಡ್ಕರ್ ತತ್ವಕ್ಕೆ ಬದ್ಧ
ತಮ್ಮ ಆಡಳಿತದ ಸಿದ್ಧಾಂತವನ್ನು ಪುನರುಚ್ಚರಿಸಿದ ಸಿದ್ದರಾಮಯ್ಯ, "ನಾನು ಯಾವಾಗಲೂ ಬುದ್ಧ, ಬಸವಣ್ಣ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ತತ್ವಗಳನ್ನು ಬಲವಾಗಿ ನಂಬಿದವನು. ಸಮಾಜದಲ್ಲಿ ಸಮಾನ ಅವಕಾಶಗಳ ಕೊರತೆಯಿಂದಾಗಿ ಅಸಮಾನತೆ ತಾಂಡವವಾಡುತ್ತಿದೆ. ಈ ಅಸಮಾನತೆಯನ್ನು ಹೋಗಲಾಡಿಸಲು ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು. ಸಂಪತ್ತು ಎಲ್ಲರಿಗೂ ಸಮನಾಗಿ ಹಂಚಿಕೆಯಾಗಬೇಕು" ಎಂದು ಪ್ರತಿಪಾದಿಸಿದರು. ೪. ಗ್ಯಾರಂಟಿ ಮತ್ತು ಭಾಗ್ಯ ಯೋಜನೆಗಳ ಸಮರ್ಥನೆತಮ್ಮ ಸರ್ಕಾರದ ಸಾಧನೆಗಳನ್ನು ಹೆಮ್ಮೆಯಿಂದ ಸ್ಮರಿಸಿದ ಅವರು:"ನನ್ನ ಮೊದಲ ಅವಧಿಯ 'ಭಾಗ್ಯ' ಯೋಜನೆಗಳು ಮತ್ತು ಪ್ರಸ್ತುತ ಸರ್ಕಾರದ 'ಐದು ಗ್ಯಾರಂಟಿ' ಯೋಜನೆಗಳು ಕೇವಲ ರಾಜಕೀಯ ಗಿಮಿಕ್ ಅಲ್ಲ; ಅವು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನ ಅವಕಾಶ ಮತ್ತು ಬದುಕಿನ ಭದ್ರತೆ ನೀಡಲು ರೂಪಿಸಿದ ಯೋಜನೆಗಳು. ಚುನಾವಣಾ ಪ್ರಣಾಳಿಕೆಯಲ್ಲಿ ನಾವು ಜನರಿಗೆ ನೀಡಿದ್ದ ಭರವಸೆಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಈಡೇರಿಸಿದ್ದೇವೆ ಎಂಬ ತೃಪ್ತಿ ನನಗಿದೆ ಎಂದಿದ್ದಾರೆ.
ಮಾಧ್ಯಮ ಗೋಷ್ಠಿಗೂ ಮುನ್ನ ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಚಿವರೊಂದಿಗಿನ ಕರಡಿನ ಉಪಾಹಾರ ಕೂಟದಲ್ಲಿ ಸಿದ್ದರಾಮಯ್ಯ ಅವರು ಭಾಷಣ ಮಾಡುವಾಗ ಕೊಂಚ ಭಾವುಕರಾಗಿ ಕಣ್ಣೀರು ಹಾಕಿದರು ಎಂದು ವರದಿಯಾಗಿದೆ. ಆ ವೇಳೆ ಸಂಪುಟ ಸಹೋದ್ಯೋಗಿಗಳಿಗೆ ಧನ್ಯವಾದ ತಿಳಿಸಿದ ಅವರು, ತಮ್ಮ ನಂತರ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಸ್ತಾಪಿಸಿ ಒಮ್ಮತದ ಬೆಂಬಲ ಸೂಚಿಸಿದರು.
ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ, ಜನರ ಪರವಾಗಿ ಧ್ವನಿ ಎತ್ತುವುದನ್ನು ನಿಲ್ಲಿಸುವುದಿಲ್ಲ. ಅಧಿಕಾರ ಇರಲಿ, ಇಲ್ಲದಿರಲಿ ಸಮಾಜದ ಶೋಷಿತ ವರ್ಗಗಳ ಏಳಿಗೆಗಾಗಿ ನನ್ನ ಹೋರಾಟ ನಿರಂತರವಾಗಿರುತ್ತದೆ ಎನ್ನುವ ಮೂಲಕ ಸಿದ್ದರಾಮಯ್ಯ ತಮ್ಮ ಭಾಷಣ ಮುಗಿಸಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ