Publish Date: Thu, 23 Feb 2023 (18:16 IST)
Updated Date: Thu, 23 Feb 2023 (18:18 IST)
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ನನ್ನ ಮೇಲೆ ಬಹಳ ಪ್ರೀತಿಯಿದೆ. ನನಗೆ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವಂತೆ ಹೇಳಿದ್ದಾರೆ. ಹೀಗಾಗಿ ಯಡಿಯೂರಪ್ಪಗೆ ನಾನು ಧನ್ಯವಾದ ತಿಳಿಸುತ್ತೇನೆ. ಸಿಎಂ ಸ್ಥಾನದಿಂದ ಇಳಿಸಿದ ಮೇಲೆ ಅವರು ಸ್ವಲ್ಪ ಡಿಸ್ಟರ್ಬ್ ಆಗಿದ್ದಾರೆ ಎಂದು ವಿಜಯಪುರದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ಬಾದಾಮಿಯಲ್ಲಿ ಸ್ಪರ್ಧಿಸದ ವಿಚಾರವಾಗಿ ಯಡಿಯೂರಪ್ಪ ಬುಧವಾರ ವಿಧಾನಸಭೆಯಲ್ಲಿ ಉಲ್ಲೇಖಿಸಿದ್ದರು. ಸೋಲಿನ ಭೀತಿಯಿಂದ ಸಿದ್ದರಾಮಯ್ಯ ಕ್ಷೇತ್ರ ಬದಲಾಯಿಸುತ್ತಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಎಸ್ವೈಗೆ ದೇವರು ಆಯುಷ್ಯ, ಆರೋಗ್ಯ ಕೊಡಲೆಂದು ಪ್ರಾರ್ಥಿಸುತ್ತೇನೆ. ನಾನು ಬಾದಾಮಿ ಕ್ಷೇತ್ರದಿಂದ ಗೆಲ್ಲುವುದಿಲ್ಲ ಎಂದೇನಿಲ್ಲ. ಸ್ಪರ್ಧಿಸಿದರೆ ಗೆದ್ದೇ ಗೆಲ್ಲುತ್ತೇನೆ. ಬಾದಾಮಿ ಕ್ಷೇತ್ರದಲ್ಲಿ ನಾನು ನೂರಕ್ಕೆ ನೂರರಷ್ಟು ಗೆದ್ದೇ ಗೆಲ್ಲುತ್ತೇನೆ. 5 ವರ್ಷ ಶಾಸಕನಾಗಿ ಕ್ಷೇತ್ರದ ಜನರ ಕಷ್ಟ ಸುಖಕ್ಕೆ ಸ್ಪಂದಿಸಿದ್ದೇನೆ. ಹೀಗಾಗಿ ಬಾದಾಮಿ ಜನರಿಗೆ ದ್ರೋಹ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ತೀರ್ಮಾನಿಸುವುದು ನನಗೆ ಬಿಟ್ಟ ವಿಚಾರ. ನಂತರ ಕಾಂಗ್ರೆಸ್ ಪಕ್ಷ ತೀರ್ಮಾನ ಮಾಡುತ್ತದೆ ಎಂದು ಹೇಳಿದ್ದಾರೆ.