ಬೆಂಗಳೂರು: ಮುಖ್ಯಮಂತ್ರಿಗಳು ತಮ್ಮ ಪರಮಾಪ್ತ, ಮುಡಾ ಚಯರ್‍ಮನ್ ಮರಿಗೌಡರ ರಾಜೀನಾಮೆ ಪಡೆದುದು ಯಾಕೆ? ಅವರ ರಾಜೀನಾಮೆ ಪಡೆದು ಅವರ ಮೇಲೆ ಹಗರಣವನ್ನು ಹೊರಿಸಲು ಹೊರಟಿದ್ದಾರೆ ಎಂದು ಕು.ಶೋಭಾ ಕರಂದ್ಲಾಜೆ ಅವರು ಆರೋಪಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕು; ಬೈರತಿ ಸುರೇಶ್ ಅವರನ್ನು ತಕ್ಷಣ ಬಂಧಿಸಬೇಕು. ಬೈರತಿ ಸುರೇಶ್ ಬಂಧನವಾದೊಡನೆ ಸತ್ಯ ಹೊರಕ್ಕೆ ಬರಲಿದೆ. ಅವರ ತನಿಖೆ ನಡೆಸಬೇಕಿದೆ. ತಪಾಸಣೆ ಮಾಡಬೇಕಿದೆ; ಅವರು ತಂದ ಕಡತಗಳ ವಿವರ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಮುಡಾ ಕಾರ್ಯದರ್ಶಿಯನ್ನು ಅಮಾನತು ಮಾಡಿದ್ದಾರೆ. ಬಳಿಕ ಅಮಾನತು ವಾಪಸ್ ಪಡೆದಿದ್ದಾರೆ. ಸಿದ್ದರಾಮಯ್ಯನವರು 2013ರಲ್ಲಿ ತಮ್ಮ ಕೇಸುಗಳಿಂದ ಹೊರಕ್ಕೆ ಬರಲು ಲೋಕಾಯುಕ್ತವನ್ನು ಮುಚ್ಚಿದ್ದರು. ಟರ್ಫ್ ಕ್ಲಬ್ ಕೇಸಿನಲ್ಲಿ ಸ್ಟೂವರ್ಡ್ ಮಾಡಲು ಚೆಕ್‍ನಲ್ಲಿ 1.30 ಕೋಟಿ ಪಡೆದವರು ಸಿದ್ದರಾಮಯ್ಯ. ಸಿದ್ದರಾಮಯ್ಯನವರು ಹೇಗೆ ಭ್ರಷ್ಟಾಚಾರರಹಿತರು? ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಮೈಸೂರಿಗೆ ಹೋಗಿ 1997ರ ನಂತರದ ಎಲ್ಲ ಕಡತಗಳನ್ನು ಕಾರಿನಲ್ಲಿ ತುಂಬಿಸಿ ತಂದಿದ್ದಾರೆ. ಅವು ಎಲ್ಲಿ ಹೋಗಿವೆ ಎಂದು ಕೇಳಿದರು. ಅವನ್ನು ಸುಟ್ಟು ಹಾಕಲಾಗಿದೆ ಎಂದು ದೂರಿದರು.
ನಿವೇಶನ ವಾಪಸ್ ಕೊಟ್ಟಿದ್ದೇ ಅಪರಾಧಕ್ಕೆ ಮೊದಲ ಸಾಕ್ಷಿ
ಸಿಎಂ ಪತ್ನಿಗೆ ನಿವೇಶನ ಕೊಡುವ ಸಂಬಂಧ ಮುಡಾ ನಿರ್ಧಾರವಾದಾಗ ಸಿದ್ದರಾಮಯ್ಯರ ಮಗ ಯತೀಂದ್ರ ಶಾಸಕರಾಗಿದ್ದರು; ಮುಡಾ ಸದಸ್ಯರೂ ಆಗಿದ್ದರು. ಅವರ ಮೂಗಿನ ನೇರಕ್ಕೆ ನಿರ್ಧಾರವಾಗಿದ್ದು, ದಬಾವಣೆಯಿಂದ ನಿವೇಶನಗಳು ಸಿಕ್ಕಿವೆ ಎಂದು ಆರೋಪಿಸಿದರು. ಇಷ್ಟೆಲ್ಲ ನಡೆದಾಗ ಸಿದ್ದರಾಮಯ್ಯನವರು ಸಾಂವಿಧಾನಿಕ ಹುದ್ದೆಗಳಲ್ಲಿದ್ದರು. ಪ್ರಭಾರ ಬೀರಿ ಅತ್ಯಂತ ಹೆಚ್ಚು ಮೌಲ್ಯಯುತ ಪ್ರದೇಶದಲ್ಲಿ ನಿವೇಶನ ಪಡೆದು ವಾಪಸ್ ಕೊಡಲಾಗಿದೆ. ನಿವೇಶನ ವಾಪಸ್ ಕೊಟ್ಟಿದ್ದೇ ಅಪರಾಧಕ್ಕೆ ಮೊದಲ ಸಾಕ್ಷಿ ಎಂದು ಶೋಭಾ ಕರಂದ್ಲಾಜೆ ಅವರು ವಿಶ್ಲೇಷಿಸಿದರು.
ಸರಕಾರದ ಬೊಕ್ಕಸದ ಹಣ ಕೂಡ ಇವತ್ತು ಕಾಂಗ್ರೆಸ್ ಪಕ್ಷಕ್ಕೆ ವರ್ಗಾವಣೆ ಆಗುತ್ತಿದೆ. ಸಿದ್ದರಾಮಯ್ಯನವರು ತಾನು ಬಹಳ ಶುದ್ಧ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ, ಅವರ ಪರಿಶುದ್ಧತೆಯ ಒಂದೊಂದೇ ಮುಖವಾಡಗಳು ಕಳಚಿಬೀಳುತ್ತಿವೆ. ಮೈಸೂರಿನಲ್ಲಿ ನಡೆದ ಮುಡಾ ಹಗರಣ ಸಂಬಂಧ ಮೈಸೂರಿನ ಡಿ.ಸಿ. ಮೈಸೂರು ಮುಡಾದಲ್ಲಿ ಒಂದು ಸಾವಿರ ಕೋಟಿಗೂ ಹೆಚ್ಚು ಮೊತ್ತದ ಹಗರಣ ಆಗಿದ್ದು, ಇದರ ತನಿಖೆ ಮಾಡಿ ವರದಿ ಕೊಟ್ಟಿದ್ದರು. ಮೈಸೂರು ಲೋಕಾಯುಕ್ತವು ಮೊನ್ನೆ ದೇವರಾಜು ಮತ್ತು ಸಿದ್ದರಾಮಯ್ಯನವರ ಭಾಮೈದನನ್ನು ತನಿಖೆ ಮಾಡಿದ್ದರು. ಆದರೆ, ಸಿದ್ದರಾಮಯ್ಯರು ತಪ್ಪಿಸಿಕೊಂಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ನಿಮಗೋಸ್ಕರ ನೀವು ಕಾನೂನು ತಿದ್ದುಪಡಿ ಮಾಡಿದ್ದೀರೆಂದು ಹೇಳಿದ ರಾಜ್ಯ ಹೈಕೋರ್ಟ್, ಸಿದ್ದರಾಮಯ್ಯರಿಗೆ, ಕಾಂಗ್ರೆಸ್ ಸರಕಾರಕ್ಕೆ ಛೀಮಾರಿ ಹಾಕಿತ್ತು. ಲೋವರ್ ಕೋರ್ಟಿನ ಮ್ಯಾಜಿಸ್ಟ್ರೇಟ್ ಇದರ ಬಗ್ಗೆ ತನಿಖೆ ಆಗಬೇಕೆಂದಿದ್ದಾರೆ. ಮಾನ್ಯ ಗವರ್ನರ್ ಅವರು ಪ್ರಾಸಿಕ್ಯೂಶನ್‍ಗೆ ಅನುಮತಿ ನೀಡಿದ್ದು, ಅದನ್ನು ಚಾಲೆಂಜ್ ಮಾಡಿದ್ದರು. ಮೂಡಾ ಹಗರಣ ನಡೆದುದು ಸಾಬೀತಾಗಿದ್ದು, ಇ.ಡಿ. ತನಿಖೆ ನಡೆಯುತ್ತಿದೆ. ಕಾನೂನನ್ನು ಬದಲಿಸಿದ್ದನ್ನು ಇಡಿ ಕೂಡ ಹೇಳಿದೆ ಎಂದು ವಿವರಿಸಿದರು.
ಸ್ವಾಧೀನವಾಗಿದ್ದ ಕೃಷಿಯೇತರ ಭೂಮಿಯನ್ನು ಕೃಷಿ ಭೂಮಿ ಎಂದು ಹೇಳಿಕೊಂಡರು. ಅದರ ಪರಿವರ್ತನೆ ಮಾಡಿದ್ದು, ಮುಡಾ ತೆಗೆದುಕೊಂಡಿತ್ತು. ವಿಜಯನಗರ 3, 4ನೇ ಹಂತದಲ್ಲಿ ನಿಮ್ಮ ಪತ್ನಿ 2015ರಲ್ಲಿ ಶೇ 50-50 ಅನುಪಾತದಲ್ಲಿ 14 ನಿವೇಶನ ಪಡೆದಿದ್ದರು. ಮುಡಾ ಕಾರ್ಯದರ್ಶಿಗಳಿಗೆ ಒತ್ತಡ ಹೇರಿ ಇದನ್ನು ಮಾಡಿಸಿದ್ದರು ಎಂದು ಟೀಕಿಸಿದರು. ದೇವರಾಜು ನಿಜವಾದ ಮಾಲೀಕರೇ ಅಲ್ಲ; ನಿಮ್ಮ ಭಾಮೈದನಿಗೆ ಅದು ಹೇಗೆ ಬಂತು? ಅದು ದಾನವಾಗಿ ಯಾಕೆ ಬಂತು? ಪಾರ್ವತಿ ಸಿದ್ದರಾಮಯ್ಯರಿಗೆ ಈ ರೀತಿ ಮಾರ್ಗದರ್ಶನ ಮಾಡಿದ ಅಥವಾ ತಪ್ಪಾಗಿ ಮಾರ್ಗದರ್ಶನ ಕೊಟ್ಟವರು ಯಾರು ಎಂದು ಪ್ರಶ್ನೆಗಳನ್ನು ಮುಂದಿಟ್ಟರು.
ರಾಜ್ಯ ರಾಜಧಾನಿಗೆ ಹೇಳೋರು, ಕೇಳೋರು ಇಲ್ಲ
ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಒಂದೇ ಒಂದು ರೂಪಾಯಿ ಬಿಡುಗಡೆ ಆಗುತ್ತಿಲ್ಲ. ಬೆಂಗಳೂರಿನಲ್ಲಿ ಬಂದ ಮಳೆ ಇಡೀ ನಗರವನ್ನೇ ಮುಳುಗಿಸಿದೆ. ಬೆಂಗಳೂರು ಹೇಗಿದೆ? ಇಲ್ಲಿನ ಜನರು ಹೇಗಿದ್ದಾರೆ? ಎಷ್ಟು ಮುಳುಗಿದೆ? ಯಾರು ಮುಳುಗಿದ್ದಾರೆ ಎಂದು ಕೇಳುವವರು, ಹೇಳುವವರು ಇಲ್ಲವಾಗಿದೆ ಎಂದು ಶೋಭಾ ಕರಂದ್ಲಾಜೆ ಅವರು ಟೀಕಿಸಿದರು.
ಕರ್ನಾಟಕ ರಾಜ್ಯವು ಒಂದು ಕಾಲದಲ್ಲಿ ಅಭಿವೃದ್ಧಿ ಪರವಾಗಿ ಯೋಜನೆ ಅನುಷ್ಠಾನಗೊಳಿಸುತ್ತಿದ್ದ ಅತ್ಯಂತ ಶಾಂತಿಯುತ ರಾಜ್ಯವಾಗಿತ್ತು. ದೇಶದ ಎಲ್ಲ ಭಾಗದ ಜನರು ಬೆಂಗಳೂರಿನಲ್ಲಿ ಬಂದು ವಾಸಿಸಲು ಯೋಚಿಸುತ್ತಿದ್ದರು. ಬೆಂಗಳೂರು ಗಾರ್ಡನ್ ಸಿಟಿ, ಬೆಂಗಳೂರನ್ನು ದೇಶದ ಸಿಂಗಾÀಪುರ್ ಮಾಡಬೇಕೆಂಬ ಹಲವಾರು ಮಾತುಗಳನ್ನು ಹಲವಾರು ವರ್ಷಗಳಿಂದ ನಾವು ಕೇಳುತ್ತಿದ್ದೆವು. ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಬಂದ ಬಳಿಕ ಕರ್ನಾಟಕದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತವಾಗಿದೆ. ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಭ್ರಷ್ಟಾಚಾರದಿಂದ ದುಡ್ಡು ಮಾಡುವುದೇ ದಂಧೆ ಎಂಬಂತಾಗಿದೆ. ಸಿದ್ದರಾಮಯ್ಯನವರು ಅತ್ಯಂತ ಹೆಚ್ಚು ಬಜೆಟ್ ಮಂಡಿಸಿದ ಸಿಎಂ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಆದರೆ, ಅವರು ಈ ಬಾರಿ ಹಣಕಾಸು ಸಚಿವರಾಗಿದ್ದು ಕೇವಲ ಭ್ರಷ್ಟಾಚಾರ ಮಾಡಲೆಂದು ಸಾಬೀತಾಗುತ್ತಿದೆ ಎಂದು ಆಕ್ಷೇಪಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವರು ಮಾಡಿದ ಭ್ರಷ್ಟಾಚಾರ, ರಾಷ್ಟ್ರೀಯ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಹಣ ಹೋಗಿರುವುದೇ ಭ್ರಷ್ಟಾಚಾರ ಮಾಡುವುದಕ್ಕಾಗಿ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಈ ನಿಗಮಕ್ಕೆ ಹಣ ಕೊಟ್ಟು ಚುನಾವಣೆಗೆ ಬಳಸುವುದನ್ನು ಸರಕಾರ ಮಾಡಿದೆ ಎಂದು ಆರೋಪಿಸಿದರು. ಹಣಕಾಸು ಸಚಿವರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೂಗಿನ ನೇರದ ಕೆಳಗೆ ಈ ನಿಗಮದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಪರಿಶಿಷ್ಟ ವರ್ಗದವರಿಗೆ ಖರ್ಚಾಗಬೇಕಿದ್ದ ಕರ್ನಾಟಕದ ಹಣ ತೆಲಂಗಾಣಕ್ಕೆ, ಬಳ್ಳಾರಿಗೆ ಹೋಗಿದೆ ಎಂದು ವಿವರಿಸಿದರು.