ತಮಿಳುನಾಡು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಆರೋಪಿ ತಮಿಳುನಾಡಿನಿಂದ ಬಂದವನು ಎಂದು ಹೇಳಿಕೆ ನೀಡಿದ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಎಂಕೆ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ರಾಮೇಶ್ವರಂ ಕೆಫೆ ಸ್ಫೋಟದ ಬಗ್ಗೆ ಈ ಹಿಂದೆ ಶೋಭಾ ಕರಂದ್ಲಾಜೆ ಅವರು, 'ತಮಿಳುನಾಡಿನಿಂದ ಬಂದ ವ್ಯಕ್ತಿಯೊಬ್ಬ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟಿದ್ದ. ದೆಹಲಿಯಿಂದ ಬಂದ ವ್ಯಕ್ತಿಯೊಬ್ಬ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ. ಕೇರಳದಿಂದ ಬಂದ ವ್ಯಕ್ತಿಯೊಬ್ಬ ವಿದ್ಯಾರ್ಥಿಗಳ ಮೇಲೆ ಆ್ಯಸಿಡ್ ಎರಚಿದ್ದ' ಎಂದು ಮಂಗಳವಾರ ಹೇಳಿದ್ದರು.
ಕೇಂದ್ರ ಸಚಿವರು ಪ್ರಜಾಪ್ರತಿನಿಧಿ ಕಾಯ್ದೆ, 1951 ಮತ್ತು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿರುವ ತಮಿಳುನಾಡು ಸರ್ಕಾರ ಕರಂದ್ಲಾಜೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಚುನಾವಣಾ ಸಮಿತಿಗೆ ಮನವಿ ಮಾಡಿದೆ. ಇನ್ನೂ ಹೇಳಿಕೆ ನೀಡಿದ ಬೆನ್ನಲ್ಲೇ ಸಚಿವೆ ಶೋಭಾ ಕರಂದ್ಲಾಜೆ ಅವರು ಕ್ಷಮೆ ಯಾಚಿಸಿ, ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ನನ್ನ ಮಾತುಗಳು ಪ್ರಕರಣದ ಬಗ್ಗೆ ಬೆಳಕು ಚೆಲ್ಲುವ ಉದ್ದೇಶ ಇದ್ದವೇ ಹೊರತು ಆರೋಪ ಹೊರಿಸುವ ಆಶಯ ಇರಲಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಆದರೂ ನನ್ನ ಹೇಳಿಕೆಗಳು ಕೆಲವರಿಗೆ ನೋವು ತಂದಿರುವುದನ್ನು ಗಮನಿಸಿದ್ದೇನೆ, ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನನ್ನ ಟೀಕೆಗಳು ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿ ಕೃಷ್ಣಗಿರಿ ಅರಣ್ಯದಲ್ಲಿ ತರಬೇತಿ ಪಡೆದವರ ಬಗ್ಗೆ ಹೇಳಿರುವುದಾಗಿತ್ತು. ತಮಿಳುನಾಡಿನ ಎಲ್ಲರಿಗೂ, ನನ್ನ ಹೃದಯದಿಂದ ಕ್ಷಮೆಯನ್ನು ಕೇಳುತ್ತೇನೆ. ಇದಲ್ಲದೆ, ನಾನು ನನ್ನ ಹಿಂದಿನ ಮಾತುಗಳನ್ನು ಹಿಂತೆಗೆದುಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.