ಮೈಸೂರು: ಅತ್ತ ಶಾಸಕರ ರಾಜೀನಾಮೆ ಅಂಗೀಕರಿಸದೇ ಇತ್ತ ಸದನದಲ್ಲಿ ಕಾಂಗ್ರೆಸ್ ಪರವಾಗಿ ಸದನ ನಡೆಸುತ್ತಿರುವ ಸ್ಪೀಕರ್ ರಮೇಶ್ ಕುಮಾರ್ ಕಾಂಗ್ರೆಸ್ ಏಜೆಂಟ್ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ನಡೆಸಿ, ಸರ್ಕಾರ ಬಹುಮತವಿದೆಯೋ ಇಲ್ಲವೋ ಎಂದು ಸಾಬೀತು ಪಡಿಸಲು ಸ್ಪೀಕರ್ ಅವಕಾಶ ಮಾಡಿಕೊಡಬೇಕು. ಅದರ ಬದಲು ಕಾಂಗ್ರೆಸ್ ಪಕ್ಷದ ಏಜೆಂಟ್ ನಂತೆ ನಡೆದುಕೊಳ್ಳುತ್ತಿದ್ದಾರೆ.
ಶಾಸಕರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿ ಇಷ್ಟು ದಿನವಾಗಿದ್ದರೂ ಅದನ್ನು ಅವರು ಅಂಗೀಕರಿಸಿಲ್ಲ ಯಾಕೆ ಎಂದು ಸಂಸದೆ ಪ್ರಶ್ನಿಸಿದ್ದಾರೆ. ಇನ್ನು, ಬಿಜೆಪಿ ಕಾಂಗ್ರೆಸ್ ಶಾಸಕರನ್ನು ಕಿಡ್ನ್ಯಾಪ್ ಮಾಡಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಶೋಭಾ, ಅವರು ಯಾರೂ ಚಿಕ್ಕಮಕ್ಕಳಲ್ಲ. ಅವರಿಗೆ ಏನು ತಪ್ಪು ಏನು ಸರಿ ಎನ್ನುವ ತಿಳುವಳಿಕೆ ಇರುತ್ತದೆ. ನಾವು ಯಾರನ್ನೂ ಕಿಡ್ನ್ಯಾಪ್ ಮಾಡಬೇಕಾಗಿಲ್ಲ ಎಂದಿದ್ದಾರೆ.