Select Your Language

Notifications

webdunia
webdunia
webdunia
webdunia

ಕರ್ನಾಟಕದ್ದು ಕಟಾಕಟ್ ಗುಂಡಿಗಳ ಮಾದರಿಯ ಸರಕಾರ: ಶಹಜಾದ್ ಪೂನಾವಾಲ

Shahbaz Punawala

Krishnaveni K

ಬೆಂಗಳೂರು , ಶನಿವಾರ, 20 ಸೆಪ್ಟಂಬರ್ 2025 (14:22 IST)
ಬೆಂಗಳೂರು: ನವರಾತ್ರಿಯ ಮೊದಲ ದಿನ, ಸೆ. 22ರಂದು ದೇಶವು ಸರಳೀಕೃತ ಜಿಎಸ್‍ಟಿ ವ್ಯವಸ್ಥೆಯನ್ನು ಹೊಂದಲಿದೆ. ಇದರ ಮೂಲಕ ಪ್ರಧಾನಿ ನರೇಂದ್ರ ಮೋದಿಜೀ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೀಪಾವಳಿ ಬರುವ ಮೊದಲೇ ದೀಪಾವಳಿ ಉಡುಗೊರೆ ಕೊಟ್ಟಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲ ಅವರು ವಿಶ್ಲೇಷಿಸಿದ್ದಾರೆ.
 
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಜಿಎಸ್‍ಟಿ ವ್ಯವಸ್ಥೆಯಿಂದ ಮಧ್ಯಮ ವರ್ಗಕ್ಕೆ ಹೆಚ್ಚಿನ ಲಾಭ ಸಿಗಲಿದೆ. ತೆರಿಗೆ ಸ್ಲ್ಯಾಬ್ ಸರಳವಾಗಲಿದೆ ಎಂದು ವಿವರಿಸಿದರು. ಇದು ಕೆಲವರ ಆಕ್ಷೇಪದಂತೆ ಗಬ್ಬರ್ ಸಿಂಗ್ ಟ್ಯಾಕ್ಸ್ ಅಲ್ಲ; ಇದು ಗುಡ್ (ಉತ್ತಮ) ಮತ್ತು ಸಿಂಪಲ್ (ಸರಳ) ತೆರಿಗೆ ಎಂದು ತಿಳಿಸಿದರು. ಉಳಿತಾಯ ಹೆಚ್ಚಳ ಮತ್ತು ಕನಿಷ್ಠ ತೆರಿಗೆಯ ಲಾಭವನ್ನು ಜನರಿಗೆ ಕೊಡುತ್ತದೆ ಎಂದು ಹೇಳಿದರು.
 
 ಹಿಂದೆ ರಾಜ್ಯಗಳಲ್ಲಿ ಬಹು ತೆರಿಗೆ ಪದ್ಧತಿ ಜಾರಿಯಲ್ಲಿತ್ತು. 8 ವರ್ಷಗಳ ಹಿಂದೆ ಜಿಎಸ್‍ಟಿ ಅನುಷ್ಠಾನಕ್ಕೆ ಬಂತು. ಆಗ 4 ಸ್ಲ್ಯಾಬ್ ಇತ್ತು. ಸೆ. 22ರಿಂದ ಅದು 2 ತೆರಿಗೆಗಳ ಸ್ಲ್ಯಾಬ್ ಆಗಿ (ಶೇ 5, 18) ಬದಲಾವಣೆ ಕಾಣಲಿದೆ. ಶೇ 12ರಡಿ ಇದ್ದ 99 ಸರಕುಗಳು ಶೇ 5ರ ತೆರಿಗೆಯಡಿ ಬರಲಿವೆ. ಶೇ 28 ತೆರಿಗೆ ವ್ಯಾಪ್ತಿಗೆ ಬರುತ್ತಿದ್ದ ಬಹುತೇಕ ಸರಕುಗಳು ಶೇ 18ರಡಿ ಬರಲಿವೆ. ಇವೆಲ್ಲವುಗಳ ಬೆಲೆ ಕಡಿಮೆ ಆಗುತ್ತಿದೆ ಎಂದು ತಿಳಿಸಿದರು.
 
ಮೆಟ್ರೋ ರೈಲು ಸಂಪರ್ಕ ವಿಸ್ತರಣೆ, ಸಾರ್ವಜನಿಕ ಸಾರಿಗೆಗೆ ಒತ್ತು, 12 ಲಕ್ಷದ ವರೆಗೆ ಆದಾಯ ತೆರಿಗೆ ಮಿತಿಯ ಹೆಚ್ಚಳ, ಮನೆ ಸಾಲ, ಶಿಕ್ಷಣ ಸಾಲದ ಬಡ್ಡಿ ಕಡಿಮೆ ಮಾಡಲಾಗಿದೆ. ಕನಿಷ್ಠ ಹಣದುಬ್ಬರದ ಕೊಡುಗೆ ಕೊಡಲಾಗಿದೆ ಎಂದರು.
 
ಹಗರಣ, ಲೂಟಿ, ಬೆಲೆ ಏರಿಕೆಯ ಸರಕಾರ
ಒಂದೆಡೆ ಕಟಾ ಕಟ್ ಗುಂಡಿಗಳ ಮಾದರಿ ಕರ್ನಾಟಕದಲ್ಲಿದೆ. ಬೆಲೆ ಏರಿಕೆ ಮೂಲಕ ಲೂಟಿ, ಮುಡಾ, ವಾಲ್ಮೀಕಿ, ಅಬಕಾರಿ ಸೇರಿದಂತೆ ವಿವಿಧ ಹಗರಣಗಳ ಮೂಲಕ ಲೂಟಿ ನಡೆದಿದೆ. ಸ್ಟಾಂಪ್ ಡ್ಯೂಟಿ, ನೀರು, ಹಾಲು, ಪೆಟ್ರೋಲ್, ಡೀಸೆಲ್- ಎಲ್ಲ ಅವಶ್ಯಕ ವಸ್ತುಗಳ ಬೆಲೆ ಏರಿಸಲಾಗಿದೆ. ಲೂಟಿ ಸರಕಾರ ಮಾತ್ರವಲ್ಲ; ಇದೊಂದು ಸುಳ್ಳರ ಸರಕಾರ ಎಂದು ಆರೋಪಿಸಿದರು.
 
ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುತ್ತಿಲ್ಲ; ಅತಿ ಹೆಚ್ಚು ತೆರಿಗೆ ಇದ್ದರೂ ಗುಂಡಿಗಳು, ಮೂಲಸೌಕರ್ಯದ ಕೊರತೆ ಜನರನ್ನು ಬಾಧಿಸುವಂತಾಗಿದೆ. ಡಿ.ಕೆ.ಶಿವಕುಮಾರ್- ಸಿದ್ದರಾಮಯ್ಯರ ನಡುವೆ ಕುರ್ಚಿ ಕದನ ನಡೆದಿದೆ ಎಂದು ಟೀಕಿಸಿದರು.
 
ಇನ್ನೊಂದೆಡೆ ಮೋದಿ ಮಾದರಿ ಸರಕಾರವಿದೆ. ಲೂಟಿ, ಸುಳ್ಳು ಇಲ್ಲದ ಸರಕಾರವದು. ದೇಶವನ್ನು ಸದೃಢವಾಗಿ ಮಾಡುವ ಹಾಗೂ ಮಧ್ಯಮ ವರ್ಗಕ್ಕೆ ಒಳಿತನ್ನು ಕೊಡುವ ಸರಕಾರ ಕೇಂದ್ರದ್ದು ಎಂದು ವಿಶ್ಲೇಷಿಸಿದರು. ರೈತರು, ಯುವಜನರು, ಎಂಎಸ್‍ಎಂಇಗೆ ಸೆಲ್ಯೂಟ್ ಹೊಡೆಯುವ ಸರಕಾರ ಕೇಂದ್ರದಲ್ಲಿದೆ ಎಂದು ನುಡಿದರು.
 
ಸದೃಢ ಆರ್ಥಿಕ ಶಕ್ತಿಯಾಗಿ ಭಾರತ

ದೇಶದ ಆರ್ಥಿಕತೆಯನ್ನು ದೃಢಪಡಿಸುವ ನಿಟ್ಟಿನಲ್ಲಿ ಕೇಂದ್ರವು ಕೆಲಸ ಮಾಡುತ್ತಿದೆ. ಕೆಲವರು ರಾಜಕೀಯ ಕ್ಷೇತ್ರದಲ್ಲಿ ವಿಫಲವಾಗಿದ್ದು, ಅಂಥವರು ನಮ್ಮ ಆರ್ಥಿಕತೆ ಸಾವಿನತ್ತ ಸಾಗಿದೆ ಎನ್ನುತ್ತಾರೆ ಎಂದು ಟೀಕಿಸಿದರು. ಭಾರತದ ಆರ್ಥಿಕತೆಯು ಹಿಂದೆ ಅತ್ಯಂತ ದುರ್ಬಲವಾಗಿತ್ತು. ಕಳೆದ 11 ವರ್ಷಗಳಲ್ಲಿ ಪ್ರಧಾನಿ ಮೋದಿಜೀ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ವಿಶ್ವದ 4ನೇ ಸದೃಢ ಆರ್ಥಿಕತೆಯಾಗಿ ಬೆಳೆದುನಿಂತಿದೆ. ಅತ್ಯಂತ ವೇಗವಾಗಿ ಅದು ಬೆಳವಣಿಗೆ ಸಾಧಿಸುತ್ತಿದೆ. ಜಿಡಿಪಿ ಬೆಳವಣಿಗೆ ಶೇ 7.5ರಷ್ಟಿದೆ ಎಂದು ವಿವರಿಸಿದರು.

ಎರಡಂಕಿಯಷ್ಟಿದ್ದ ಹಣದುಬ್ಬರವು ಈಗ ಶೇ 2ರಷ್ಟಿದ್ದು, ಕನಿಷ್ಠ ಮಟ್ಟದಲ್ಲಿದೆ. ಎನ್‍ಪಿಎ ಕನಿಷ್ಠ ಪ್ರಮಾಣದಲ್ಲಿದೆ. 703 ಬಿಲಿಯ ಡಾಲರ್ ವಿದೇಶಿ ವಿನಿಮಯ ರಿಸರ್ವ್ ದೇಶದ ಬಳಿ ಇದೆ. ರಫ್ತು ಪ್ರಮಾಣವೂ ಗಣನೀಯ ಹೆಚ್ಚಳ ದಾಖಲಿಸಿದೆ. ನಮ್ಮ ಕ್ರೆಡಿಟ್ ರೇಟಿಂಗ್ ಕೂಡ ಸುಧಾರಿಸಿದೆ ಎಂದು ತಿಳಿಸಿದರು.
 
ಇಪಿಎಫ್‍ಒ (ಭವಿಷ್ಯ ನಿಧಿ ಸಂಘಟನೆ) ಮಾಹಿತಿ ಗಮನಿಸಿದರೆ ನಿರುದ್ಯೋಗಿಗಳ ಪ್ರಮಾಣವೂ ಕನಿಷ್ಠಕ್ಕೆ ಇಳಿದಿದೆ ಎಂದು ವಿವರ ನೀಡಿದರು. ಕಳೆದ 10-11 ವರ್ಷಗಳಲ್ಲಿ 25 ಕೋಟಿ ಜನರು ಬಡತನ ರೇಖೆಗಿಂತ ಮೇಲೆತ್ತಲ್ಪಟ್ಟಿದ್ದಾರೆ. ದರ್ಬಾರಿ ಜನರೇಷನ್‍ನಲ್ಲಿ ಇರುವವರಿಗೆ ಸಮರ್ಪಕ ಉತ್ತರ ಸಿಗುತ್ತಿದೆ ಎಂದು ಹೇಳಿದರು. ಕರ್ನಾಟಕದಲ್ಲಿ ಇರುವುದು ನಿಜಕ್ಕೂ ನನಗೆ ಗೌರವದ ವಿಚಾರ ಎಂದು ತಿಳಿಸಿ ಅವರು ಗೋಷ್ಠಿಗೆ ಚಾಲನೆ ಕೊಟ್ಟರು.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಶ್ಚಿಯನ್ ಜೊತೆ ಹಿಂದೂ ಜಾತಿ ಬದಲು ಜಾತಿಗಣತಿ ಸಮೀಕ್ಷೆಯಲ್ಲಿರಲಿದೆ ಈ ಕಾಲಂ