ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಒಂದು ರೀತಿಯಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಆದರೆ, ಕೇಂದ್ರ ಸರಕಾರ ನೂರಕ್ಕೆ ನೂರರಷ್ಟು ವಿಫಲವಾಗಿದೆ.
ಹೀಗಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಾವೇರಿಯಲ್ಲಿ ನಿರ್ಮಿಸುತ್ತಿರುವ ವಾಲ್ಮೀಕಿ ವೃತ್ತದ ಕಾಮಗಾರಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಹಿನ್ನಲೆಯಲ್ಲಿ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ನೂರಾರು ಕಿ.ಮೀ. ನಡೆದು ಸಾಕಷ್ಟು ತೊಂದರೆ ಅನುಭವಿಸಿದರು. ಈಗಲೂ ವಲಸೆ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕೇಂದ್ರ ಲಾಕ್ ಡೌನ್ ಮಾಡುವ ಸಮಯದಲ್ಲಿ ಕೇವಲ ನಾಲ್ಕು ಗಂಟೆ ಸಮಯ ಕೊಟ್ಟಿತ್ತು.
ಬೇರೆ ಭಾಗಗಳಲ್ಲಿ ಸಿಕ್ಕಿ ಹಾಕಿಕೊಂಡ ಕಾರ್ಮಿಕರು ಅವರ ಊರಿಗೆ ಹೋಗಲು ಸಾಕಷ್ಟು ಸಮಯ ಕೊಡಬೇಕಾಗಿತ್ತು. ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಬೇಕಾಗಿತ್ತು. ಏಕಾಏಕಿ ಲಾಕ್‌ಡೌನ್ ಮಾಡಿದ್ದಕ್ಕೆ ಜನರು ತೊಂದರೆಗೆ ಒಳಗಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.