ಬೆಳಗಾವಿ : ಉದ್ದೇಶಪೂರ್ವಕವಾಗಿ ಯಾರನ್ನೋ ಹೊರಗಿಟ್ಟು ಸಭೆ ನಡೆಸುವ ಅಗತ್ಯ ಇರಲಿಲ್ಲ ಎಂದು ಜಾರಕಿಹೊಳಿ ಸಹೋದರರು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಬೆಳಗಾವಿಯಲ್ಲಿ ಸಚಿವ ಉಮೇಶ್ ಕತ್ತಿ ಅವರ ನಿವಾಸದಲ್ಲಿ ನಡೆದ ಆಡಳಿತಾರೂಢ ಬಿಜೆಪಿ ಮುಖಂಡರ ಸಭೆಯಿಂದ ತಮ್ಮನ್ನು ಹೊರಗಿಟ್ಟಿರುವ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿರುವ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ, ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಮಾರ್ಮಿಕವಾಗಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ಸಭೆ ಬಿಜೆಪಿಯ ಅಧಿಕೃತ ಸಭೆಯಲ್ಲ. ಈ ಸಭೆಗೆ ಹೆಚ್ಚಿನ ಮಹತ್ವ ನೀಡುವುದು ಬೇಡ ಎಂದು ಬಾಲಚಂದ್ರ ಜಾರಕಿಹೊಳಿ ಸಾಮಾಜಿಕ ಜಾಲತಾಣದ ಮೂಲಕ ಹೇಳಿದ್ದಾರೆ. ಯಾರನ್ನು ಹೊರಗಿಟ್ಟು ಸಭೆ ನಡೆಸಿದ್ದಾರೆ ಎಂದು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ.
ಇನ್ನು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ನಾನು ಅಂಥ ಸಭೆಗೆ ಹೋಗುವುದಿಲ್ಲ. ಪ್ರೀತಿ ಇರುವ ಸಭೆಗೆ ಹೋಗುತ್ತೇನೆ. ಅಲ್ಲಿ ಏನು ನಡೆದಿದೆ ಎಂಬುದು ಸರಿಯಾಗಿ ಗೊತ್ತಿಲ್ಲದೆ ಮಾತನಾಡುವುದು ಸರಿಯಲ್ಲ. ಪಕ್ಷದ ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದರು.