ರಾಜ್ಯ ಪದವಿ ಪೂರ್ಣ ಶಿಕ್ಷಣ ಇಲಾಖೆ ನಡೆಸಿರುವ ಪ್ರಸಕ್ತ 2022ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ (2nd puc result) ಪ್ರಕಟಗೊಂಡಿದೆ. ಈ ಬಾರಿ ಶೇ.61.88ರಷ್ಟು ಫಲಿತಾಂಶ ಬಂದಿದ್ದು, ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್ ಬೆಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದ್ದು, ಒಟ್ಟು 6,83,563 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 4,22,966 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇಕಡಾ 68.72ರಷ್ಟು ಬಾಲಕಿಯರು ಮತ್ತು ಶೇಕಡಾ 55.22ರಷ್ಟು ಬಾಲಕರು ತೇರ್ಗಡೆ ಹೊಂದಿದ್ದಾರೆ.
ಗ್ರಾಮಾಂತರ ಭಾಗದಲ್ಲಿ ಶೇಕಡಾ 62.18 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರೆ, ನಗರ ಪ್ರದೇಶದಲ್ಲಿ ಶೇಕಡಾ 61.78 ವಿದ್ಯಾರ್ಥಿಗಳು ಪಾಸಾಗಿದ್ದಾರೆ.ಪೂರಕ ಪರೀಕ್ಷೆ ದಿನಾಂಕ ಈ ತಿಂಗಳಾಂತ್ಯಕ್ಕೆ ಪ್ರಕಟಿಸಲಾಗುತ್ತದೆ.
ಕಲಾ ವಿಭಾಗದಲ್ಲಿ 2,28,167 ಮಂದಿ, ವಾಣಿಜ್ಯ ವಿಭಾಗದಲ್ಲಿ 2,45,519 ಮಂದಿ ಮತ್ತು ವಿಜ್ಞಾನ ವಿಭಾಗದಲ್ಲಿ 2,10,569 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಶೇ.72.53 ವಿಜ್ಞಾನ ವಿದ್ಯಾರ್ಥಿಗಳು, ಶೇ.64.97 ವಾಣಿಜ್ಯ, ಶೇ.48.71 ಕಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.