ಕಲಿಕಾ ಚೇತರಿಕೆ ಕಾರ್ಯಕ್ರಮದೊಂದಿಗೆ ರಾಜ್ಯದಾದ್ಯಂತ ನಾಳೆಯಿಂದ (ಮೇ 16) ಶಾಲೆಗಳು ಆರಂಭವಾಗಲಿದ್ದು, ಶಿಕ್ಷಣ ಇಲಾಖೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ತಿಳಿಸಿದರು.
ಸೋಮವಾರದಿಂದ (ಮೇ 16) ರಾಜ್ಯದಾದ್ಯಂತ ಶಾಲೆಗಳು ಆರಂಭವಾಗುತ್ತವೆ. ಸೋಮವಾರ ಮಧ್ಯಾಹ್ನ 12.30ಕ್ಕೆ ತುಮಕೂರಿನ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕಲಿಕಾ ಚೇತರಿಕೆ, 2022-23ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿ ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ಕೋವಿಡ್-19 ಹಿನ್ನೆಲೆಯಲ್ಲಿ ಕಲಿಕೆಯಲ್ಲಿ ಉಂಟಾಗಿರುವ ಹಿನ್ನಡೆ ಸರಿದೂಗಿಸಲು
ಕಲಿಕಾ ಚೇತರಿಕೆ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಈ ಸಂಬಂಧ ಶಿಕ್ಷಕರಿಗೆ ಅಗತ್ಯ ತರಬೇತಿಯನ್ನು ನೀಡಲಾಗಿದೆ. ಶಾಲೆಗಳಿಗೆ ಪಠ್ಯ ಪುಸ್ತಕಗಳನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಆರಂಭಿಸಲಾಗುತ್ತದೆ. ಕರ್ನಾಟಕ ಸಾರಿಗೆ ನಿಗಮದ ಬಸ್‌ಗಳಲ್ಲಿ ಶಾಲೆಗೆ ತೆರಳುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸ ಪಾಸ್ ಪಡೆಯುವವರೆಗೆ
ಹಿಂದಿನ ವರ್ಷ ವಿತರಿಸಲಾಗಿರುವ ವಿದ್ಯಾರ್ಥಿ ಪಾಸ್‌ಗಳನ್ನು ಪರಿಗಣಿಸಲು ಸಾರಿಗೆ ನಿಗಮದಿಂದ ಈಗಾಗಲೇ ಸುತ್ತೋಲೆಯನ್ನು ಹೊರಡಿಸಲಾಗಿದೆ ಎಂದು ಸಚಿವರು ತಿಳಿಸಿದರು.
ರಾಜ್ಯದ ಬಹುತೇಕ ಶಾಲೆಗಳ ಶಿಕ್ಷಕರು ಮತ್ತು ಎಸ್‌ಡಿಎಂಸಿ ಸದಸ್ಯರು ಶ್ರಮದಾನ ಮಾಡಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಬಣ್ಣ ಬಳಿಯುವುದು, ರಿಪೇರಿ ಸೇರಿದಂತೆ ಇನ್ನಿತರ ಅಗತ್ಯ ಕೆಲಸಗಳನ್ನು ಮಾಡಿಕೊಂಡು ಶಾಲೆಗಳ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ಸಚಿವರಿಂದ ಶ್ರಮದಾನ:
ಭಾನುವಾರ (ಮೇ 15) ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ರಂಗಾಪುರದ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಆವರಣ ಸ್ವಚ್ಛಗೊಳಿಸುವ ಶ್ರಮದಾನ ಕಾರ್ಯಕ್ರಮದಲ್ಲಿ ಸಚಿವರು ಪಾಲ್ಗೊಂಡರು.
ರಂಗಾಪುರದ ಗ್ರಾಮಸ್ಥರು, ಎಸ್‌ಡಿಎಂಸಿ ಸದಸ್ಯರು, ಸ್ಥಳೀಯರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯೊಂದಿಗೆ ಶಾಲೆ ಆವರಣವನ್ನು ಸ್ವಚ್ಛಗೊಳಿಸಿ ಗಿಡಗಳನ್ನು ನೆಟ್ಟರು. ಮಕ್ಕಳನ್ನು ಸಂಭ್ರಮದಿಂದ ಶಾಲೆಗೆ ಸ್ವಾಗತಿಸಬೇಕು ಎಂದು ಕರೆ ನೀಡಿದರು.
ಶಾಲೆಗೆ ಭೇಟಿ ನೀಡಿದ ಸುಕ್ಷೇತ್ರ ಕೆರೆಗೋಡಿ-ರಂಗಾಪುರ ಶ್ರೀ ಗುರು ಪರದೇಶಿಕೇಂದ್ರ ಮಹಾಸ್ವಾಮೀಜಿ ಅವರು ಶಾಲಾರಂಭಕ್ಕೆ ಶುಭ ಹಾರೈಸಿದರು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.