ಬೆಂಗಳೂರು: ರಾಜ್ಯದಲ್ಲಿ ನಾಳೆಯಿಂದ 9 ರಿಂದ 12 ನೇ ತರಗತಿಗಳು ಆರಂಭವಾಗಲಿದ್ದು, ವಿದ್ಯಾರ್ಥಿಗಳಿಗೆ ದಸರಾ ರಜೆಯ ನಂತರ ಸಮವಸ್ತ್ರ ಸಿಗಲಿದೆ ಎನ್ನಲಾಗಿದೆ. ನಾಳೆಯಿಂದ 2021-22ನೇ ಸಾಲಿನ ಭೌತಿಕ ತರಗತಿಗಳು ಪ್ರೌಢಶಾಲೆ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಆರಂಭವಾಗಲಿದೆ. ಆದರೆ, ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ, ಸಾಕ್ಸ್ ದಸರಾ ರಜೆಯ ನಂತರ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಸಾಲಿನಲ್ಲಿ ಸುಮಾರು ಸರ್ಕಾರಿ ಶಾಲೆಯ 45 ಲಕ್ಷ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತ ಸಮವಸ್ತ್ರ, ಶೂ ಹಾಗೂ ಸಾಕ್ಸ್ ನೀಡಬೇಕಿದೆ. ಸಮಸವಸ್ತ್ರವನ್ನು ಟೆಂಡರ್ ಮೂಲಕ ಅಥವಾ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮ ಹಾಗೂ ರಾಜ್ಯ ಜವಳಿ ಅಭಿವೃದ್ಧಿ ನಿಗಮದ ಮೂಲಕ ಮಕ್ಕಳಿಗೆ ವಿತರಿಸಲಾಗುತ್ತದೆ. ಆದರೆ, ಟೆಂಡರ್ ಪ್ರಕ್ರಿಯೆ ಇನ್ನು ಆರಂಭವಾಗದೇ ಇರುವುದರಿಂದ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಸಿಗಲಿದೆ ಎಂದು ತಿಳಿದುಬಂದಿದೆ.