ಕೋಲಾರ: ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಲ್ಲಿ ಕನ್ನಡಿಗರ ರಕ್ಷಣೆಗಾಗಿ ನೇಪಾಳಕ್ಕೆ ಹೋಗಲು ಸಿದ್ಧ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.
ನೇಪಾಳದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಘಟನೆ ಬೆನ್ನಲ್ಲೇ ಸಂಕಷ್ಟಕ್ಕೆ ಸಿಲುಕಿರುವ ಪ್ರತಿಯೊಬ್ಬ ಕನ್ನಡಿಗನ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.
ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇಪಾಳದಲ್ಲಿರುವ ಕನ್ನಡಿಗರೊಂದಿಗೆ ಈಗಾಗಲೇ ಮಾತನಾಡಿದ್ದೇನೆ.
ಸದ್ಯ ಯಾವುದೇ ಸಮಸ್ಯೆ ಇಲ್ಲ. ತಾವು ಎಲ್ಲಿದ್ದೀರೋ ಅಲ್ಲಿ ಸುರಕ್ಷಿತವಾಗಿರಿ ಎಂದಿದ್ದೇನೆ. ಅವರನ್ನು ಕರೆತರುವ ಬಗ್ಗೆ ಮುಖ್ಯಮಂತ್ರಿ ನನಗೆ ಇನ್ನು ಯಾವುದೇ ಸೂಚನೆ ನೀಡಿಲ್ಲ ಎಂದರು.
ನೇಪಾಳದಲ್ಲಿ ಭುಗಿಲೆದ್ದ ಪ್ರತಿಭಟನೆಯಿಂದ 26 ಮಂದಿ ಸಾವನ್ನಪ್ಪಿದ್ದು, 500ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪರಿಣಾಮವಾಗಿ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಸಿಲುಕಿರುವ 39 ಮಂದಿ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.