ಬೆಂಗಳೂರು : ಲಾಂಗ್ ತೋರಿಸಿ ಅಂಗಡಿಗಳಲ್ಲಿ ಹಣ ಸುಲಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಕೆ.ಜಿ.ಹಳ್ಳಿಯ ಬರ್ನಲ್ ಸಿದ್ದಿಕಿಯನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಸಂತನಗರದಲ್ಲಿ ಹಾಡಹಗಲೇ ಲಾಂಗ್ ಬೀಸಿದ ಅಸಾಮಿ ಅರೆಸ್ಟ್ ಆಗಿದ್ದಾನೆ.
ಬರ್ನಲ್ ಸಿದ್ದಿಕಿ ಆಗಾಗ ಲಾಂಗ್ ತೋರಿಸಿ ಏರಿಯಾಗಳಲ್ಲಿ ಹಾವಳಿ ಕೊಡುತ್ತಿದ್ದ. ಕಳೆದ ಭಾನುವಾರ ಸಂಜೆ ವಸಂತನಗರದ 8ನೇ ಕ್ರಾಸ್ಗೆ ಬಂದಿದ್ದ ಸಿದ್ದಿಕಿ ರಸ್ತೆ ಬದಿಯ ಅಂಗಡಿಗಳಿಗೆ ನುಗ್ಗಿ ಲಾಂಗ್ ತೋರಿಸಿ ಹಣ ವಸೂಲಿ ಮಾಡಿದ್ದ. ಸಿದ್ದಿಕಿ ಬೆದರಿಕೆಗೆ ಅಂಜಿ ಅಂಗಡಿ ಕೆಲಸಗಾರರು, ಮಾಲೀಕರು ಹಣ ನೀಡುತ್ತಿದ್ದರು. ಸದ್ಯ ಈ ಬಗ್ಗೆ ತಿಳಿಯುತ್ತಿದ್ದಂತೆ ಪೊಲೀಸರು ಖದೀಮನ ಹೆಡೆಮುರಿ ಕಟ್ಟಿದ್ದಾರೆ.
ಇನ್ನು ಪೊಲೀಸರು ಬರ್ನಲ್ ಸಿದ್ದಿಕಿಯನ್ನು ಅರೆಸ್ಟ್ ಮಾಡಿ ಠಾಣೆಗೆ ಕರ್ಕೋಂಡು ಬರ್ತಿದ್ದಂತೆ ಸಿದ್ದಿಕಿ ಹೈಡ್ರಾಮಾ ಮಾಡಿದ್ದಾನೆ. ಬಾಯಿಗೆ ಕೈ ಹಾಕಿಕೊಂಡು ಬ್ಲೇಡ್ ನುಂಗಿದ್ದೇನೆ ಎಂದಿದ್ದಾನೆ. ಬ್ಲೇಡ್ ಅಂದಾಕ್ಷಣ ಬೆಚ್ಚಿ ಬಿದ್ದ ಪೊಲೀಸರು ಆರೋಪಿ ಸಿದ್ದಿಕಿಯನ್ನು ಅಸ್ಪತ್ರೆಗೆ ಕರೆತಂದು ಸ್ಕ್ಯಾನಿಂಗ್ ಮಾಡಿಸಿದ್ದಾರೆ.
ಈ ವೇಳೆ ಬ್ಲೇಡ್ ಇಲ್ಲ ಎಂಬುದು ಪತ್ತೆಯಾಗಿದೆ. ನಂತರ ಸುಮ್ಮನೆ ಬಿಟ್ಟು ಬಿಡ್ತೀರಿ ಅಂತ ಹಾಗೆ ಹೇಳಿದೆ ಎಂದು ಪೊಲೀಸರಿಗೆ ಯಾಮಾರಿಸಲು ಯತ್ನಿಸಿದ್ದಾನೆ. ಅಲ್ಲದೇ ಇದೇ ರೀತಿ ಹಲವು ಠಾಣೆಗಳಲ್ಲಿ ಡ್ರಾಮಾ ಮಾಡಿದ್ದಾಗಿ ತಿಳಿದು ಬಂದಿದೆ.
ಸಿದ್ದಿಕಿ ಕಳ್ಳತನ, ಸುಲಿಗೆ ಪ್ರಕರಣ ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ. ಪೊಲೀಸರು ಕರೆದೊಯ್ದಾಗ ಪೇಪರ್ ನುಂಗಿ ಸೈನೇಡ್ ಎಂದಿದ್ದ. ಇವನ ಹೈಡ್ರಾಮಾ ಕಂಡು ಪೊಲೀಸರು ಬೆರಗಾಗಿದ್ದರು. ವಾರೆಂಟ್ ಇದ್ರು ಪೊಲೀಸರ ಕಣ್ತಪ್ಪಿಸಿ ಸುತ್ತಾಡ್ತಿದ್ದ ಸದ್ಯ ವಸಂತನಗರ ಸುಲಿಗೆ ಕೇಸ್ನಲ್ಲಿ ಅರೆಸ್ಟ್ ಆಗಿದ್ದು ಈ ಬಾರಿ ಆರೋಪಿಯ ಯಾವುದೇ ಡ್ರಾಮಕ್ಕೂ ತಲೆ ಕೆಡಿಸಿಕೊಳ್ಳದ ಪೊಲೀಸರು ಆರೋಪಿಯನ್ನು ಜೈಲಿಗಟ್ಟಿದ್ದಾರೆ.