ಮೈಸೂರು: ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾಗಿ ವರ್ಗಾವಣೆಗೊಂಡ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಿರ್ಗಮಿಸುವ ಮುನ್ನ ಮೈಸೂರು ಜನತೆಗೆ ಧನ್ಯವಾದ ಸಲ್ಲಿಸಿದ್ದಾರೆ.
ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಜೊತೆಗಿನ ಜಟಾಪಟಿ ಬಳಿಕ ಇಬ್ಬರೂ ಅಧಿಕಾರಿಗಳನ್ನೂ ಸರ್ಕಾರ ವರ್ಗಾವಣೆ ಮಾಡಿ ವಿವಾದಕ್ಕೆ ಅಂತ್ಯ ಹಾಡಿತ್ತು. ಈ ನಡುವೆ ಸಿಎಂ ಭೇಟಿಯಾದ ರೋಹಿಣಿ ಸಿಂಧೂರಿ ವರ್ಗಾವಣೆ ಮಾಡದಂತೆ ಮನವಿ ಮಾಡಿದ್ದರು. ಕೊರೋನಾ ವಿರುದ್ಧದ ಹೋರಾಟದಲ್ಲಿ ತಮ್ಮ ಕೆಲಸ ಅರ್ಧಕ್ಕೇ ಬಾಕಿಯಾದಂತಾಗುತ್ತದೆ. ಹೀಗಾಗಿ ವರ್ಗಾವಣೆ ಸದ್ಯಕ್ಕೆ ತಡೆಯಿರಿ ಎಂದು ಮನವಿ ಮಾಡಿದ್ದರು.
ಆದರೆ ಈಗಾಗಲೇ ವರ್ಗಾವಣೆ ಆದೇಶ ನೀಡಿಯಾಗಿರುವುದರಿಂದ ಸದ್ಯಕ್ಕೆ ಧಾರ್ಮಿಕ ಇಲಾಖೆಯ ಆಯುಕ್ತರಾಗಿ ಅಧಿಕಾರ ಸ್ವೀಕರಿಸುವಂತೆ ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ನಿರ್ಗಮಿಸುವ ಮುನ್ನ ಕಷ್ಟದ ಪರಿಸ್ಥಿತಿಯಲ್ಲೂ ಉತ್ತಮ ಕೆಲಸ ಮಾಡಿದ್ದೇನೆ. ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಲು ಅವಕಾಶ ಕೊಟ್ಟ ಎಲ್ಲರಿಗೂ ಹಾಗೂ ಮೈಸೂರಿನ ಜನತೆಗೆ ನನ್ನ ಧನ್ಯವಾದಗಳು ಎಂದಿದ್ದಾರೆ.